Bible 2 India Mobile
[VER] : [KANNADA]     [PL]  [PB] 
 <<  Job 6 >> 

1ಆ ಮೇಲೆ ಯೋಬನು ಮತ್ತೆ ಇಂತೆಂದನು,

2<<ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು; ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.

3ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು ದುಡುಕಿನಿಂದ ಮಾತನಾಡಿದ್ದೇನೆ.

4ಸರ್ವಶಕ್ತನ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.

5ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?

6ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

7ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.

8ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ, ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?

9ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ, ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.

10ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು. ಪರಿಶುದ್ದ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.

11ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ? ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?

12ನನ್ನ ಬಲವು ಕಲ್ಲಿನ ಬಲವೋ? ಅಥವಾ ನನ್ನ ಶರೀರವು ತಾಮ್ರದ್ದೋ?

13ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ, ನನ್ನ ಸಾಮರ್ಥ್ಯವು ತೊಲಗಿಹೋಗಿದೆ.

14ಒಬ್ಬನು ಮನಗುಂದಿ ಸರ್ವಶಕ್ತನ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸ ಬೇಕು.

15ನನ್ನ ಸಹೋದರರಾದರೋ ತೊರೆಯ ಹಾಗೂ, ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.

16ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.

17ಬೇಸಿಗೆ ಬರುತ್ತಲೇ ಮಾಯವಾಗುವವು, ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.

18ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ, ಮರುಭೂಮಿಗೆ ತಿರುಗಿ ನಾಶವಾಗುತ್ತವೆ.

19ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು, ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.

20ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.

21ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.

22ನನ್ನ ಬಿನ್ನಹವೇನು? <ನನಗೆ ದಾನಮಾಡಿರಿ> ಎಂದು ಬಿನ್ನಯಿಸಿದೆನೋ? ನಿಮ್ಮ ಆಸ್ತಿಯಿಂದ, <ನನಗಾಗಿ ಲಂಚಕೊಡಿರಿ> ಎಂದೆನೋ?

23ವಿರೋಧಿಯ ಕೈಯಿಂದ, <ನನ್ನನ್ನು ರಕ್ಷಿಸಿರಿ> ಎಂದು ಕೇಳಿಕೊಂಡೆನೋ? ಬಲಾತ್ಕರಿಸುವವರಿಂದ, <ನನ್ನನ್ನು ವಿಮೋಚಿಸಿರಿ> ಎಂದು ಬೇಡಿಕೊಂಡೆನೋ?

24ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಯಪಡಿಸಿರಿ, ನಾನು ಮೌನದಿಂದಿರುವೆನು.

25ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ, ಆದರೆ ನಿಮ್ಮ ಖಂಡನೆಯು ನಿರಾರ್ಥಕ?

26ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ? ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?

27ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು; ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.

28ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ, ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?

29ದಯವಿಟ್ಟು ನನ್ನ ವಿಚಾರಣೆಗೆ ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.

30ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ? ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?


  Share Facebook  |  Share Twitter

 <<  Job 6 >> 


Bible2india.com
© 2010-2024
Help
Dual Panel

Laporan Masalah/Saran