Bible 2 India Mobile
[VER] : [KANNADA]     [PL]  [PB] 
 <<  Job 32 >> 

1ಆಗ ಯೋಬನು ಸ್ವಂತ ಗಣನೆಯಲ್ಲಿ ನೀತಿವಂತನಾಗಿದ್ದರಿಂದ ಆ ಮೂವರು ಅವನಿಗೆ ಉತ್ತರಕೊಡುವುದನ್ನು ನಿಲ್ಲಿಸಿಬಿಟ್ಟರು.

2ಆಮೇಲೆ ಬೂಜ್ ಕುಲಕ್ಕೂ, ರಾಮ್ ಗೋತ್ರಕ್ಕೂ ಸೇರಿದ ಬರಕೇಲನ ಮಗನಾದ ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡಿದ್ದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟು ಬಂತು.

3ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದುದರಿಂದ ಅವನು ಅವರ ಮೇಲೂ ಕೋಪಿಸಿಕೊಂಡನು.

4ಅವರು ತನಗಿಂತ ವೃದ್ಧರಾಗಿದ್ದ ಕಾರಣ, ಎಲೀಹು ಯೋಬನೊಂದಿಗೆ ಮೊದಲು ಮಾತನಾಡದೆ ತಡೆದಿದ್ದನು.

5ಎಲೀಹು ಈ ಮೂವರ ಬಾಯಲ್ಲಿ ತಕ್ಕ ಉತ್ತರವಿಲ್ಲದ್ದನ್ನು ಕಂಡು ರೋಷಗೊಂಡನು.

6ಆಗ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಆ ಎಲೀಹು ಇಂತೆಂದನು, <<ನಾನು ಯೌವನಸ್ಥನು, ನೀವು ನನಗಿಂತ ಹಿರಿಯರು; ಆದುದರಿಂದ ಸಂಕೋಚಪಟ್ಟು ನನ್ನ ಅಭಿಪ್ರಾಯವನ್ನು ನಿಮಗೆ ಅರಿಕೆಮಾಡಲು ಹೆದರಿದೆನು.>>

7ಅದಕ್ಕೆ ಅವನು, <<ಹೆಚ್ಚು ದಿನಗಳವರು ಮಾತನಾಡಲಿ, ಬಹಳ ವರುಷದವರು ಜ್ಞಾನೋಪದೇಶಮಾಡಲಿ>> ಎಂದುಕೊಂಡಿದ್ದೆನು.

8ಆದರೆ ಮನುಷ್ಯರಲ್ಲಿ ಆತ್ಮವೊಂದುಂಟು, ಸರ್ವಶಕ್ತನ ಶ್ವಾಸದಿಂದ ಅವರಿಗೆ ವಿವೇಕ ದೊರೆಯುತ್ತದೆ.

9ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ.

10ಆದಕಾರಣ, <<ನನ್ನ ಕಡೆಗೆ ಕಿವಿಗೊಡಿರಿ, ನಾನು ನನ್ನ ಅಭಿಪ್ರಾಯವನ್ನು ಅರಿಕೆಮಾಡುವೆನೆಂದು ಹೇಳಿಕೊಳ್ಳುತ್ತೇನೆ.

11ಇಗೋ, ನೀವು ಆಡುತ್ತಿದ್ದ ಮಾತುಗಳನ್ನು ಕಾದು ಕೇಳುತ್ತಿದ್ದೆನು; ಏನು ಹೇಳಬೇಕೆಂದು ನೀವು ಆಲೋಚಿಸುತ್ತಿದ್ದಾಗ ನಿಮ್ಮ ನ್ಯಾಯಗಳಿಗಾಗಿ ಕಿವಿಗೊಟ್ಟಿದ್ದೆನು.

12ನಿಮ್ಮ ಮೇಲೆ ಲಕ್ಷ್ಯವಿಟ್ಟಿದ್ದೆನು; ಆಹಾ, ನಿಮ್ಮಲ್ಲಿ ಯೋಬನನ್ನು ಖಂಡಿಸಬಲ್ಲವನು, ಅವನ ಮಾತುಗಳಿಗೆ ಉತ್ತರಕೊಡತಕ್ಕವನು, ಯಾರೂ ಸಿಕ್ಕಲಿಲ್ಲ.

13<ನಾವು ಅವನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ, ದೇವರೇ ಅವನನ್ನು ಖಂಡಿಸಿಬಿಡಲಿ, ಮನುಷ್ಯನಿಂದಾಗುವುದಿಲ್ಲ> ಎಂದು ಅಂದುಕೊಳ್ಳಬೇಡಿರಿ.

14ಅವನು ನನಗೆ ಪ್ರತಿಕೂಲವಾಗಿ ಇನ್ನೂ ವಾದವನ್ನು ಹೂಡಲಿಲ್ಲ; ನಾನೂ ಅವನಿಗೆ ಉತ್ತರಕೊಡುವಾಗ ನಿಮ್ಮ ಹಾಗೆ ಮಾತನಾಡೆನು.

15ಅವರು ಬೆರಗಾಗಿ ಇನ್ನು ಉತ್ತರಕೊಡಲಾರರು, ಅವರ ಸೊಲ್ಲೇ ಅಡಗಿಹೋಯಿತು.

16ಅವರು ಇನ್ನು ಉತ್ತರಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?

17ನಾನೂ ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೂ ನನ್ನ ಅಭಿಪ್ರಾಯವನ್ನು ತಿಳಿಸುವೆನು.

18ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.

19ಆಹಾ, ದ್ರಾಕ್ಷಾರಸವನ್ನು ತುಂಬಿ, ಬಾಯಿಕಟ್ಟಿದ ಹೊಸ ಬುದ್ದಲಿಗಳಂತೆ ನನ್ನ ಹೊಟ್ಟೆಯು ಒಡೆದುಹೋಗುವ ಹಾಗಿದೆ.

20ನನಗೆ ಉಪಶಮನವಾಗುವ ಹಾಗೆ ಮಾತನಾಡುವೆನು. ನನ್ನ ತುಟಿಗಳನ್ನು ತೆರೆದು ಉತ್ತರ ಹೇಳುವೆನು.

21ಆದರೆ ನಾನು ಯಾರಿಗೂ ಮುಖದಾಕ್ಷಿಣ್ಯವನ್ನು ತೋರಿಸಬಾರದು, ಯಾವ ಮನುಷ್ಯನಿಗಾದರೂ ಮುಖಸ್ತುತಿಯನ್ನು ಮಾಡಕೂಡದು.

22ಮುಖಸ್ತುತಿಯನ್ನು ಮಾಡುವುದಕ್ಕೆ ನನ್ನಿಂದಾಗುವುದಿಲ್ಲ; ಮಾಡಿದರೆ ನನ್ನ ಸೃಷ್ಟಿಕರ್ತನು ನನ್ನನ್ನು ಬೇಗ ನಿರ್ಮೂಲ ಮಾಡುವೆನು.


  Share Facebook  |  Share Twitter

 <<  Job 32 >> 


Bible2india.com
© 2010-2024
Help
Dual Panel

Laporan Masalah/Saran