Bible 2 India Mobile
[VER] : [KANNADA]     [PL]  [PB] 
 <<  Job 21 >> 

1ಆಗ ಯೋಬನು ಇಂತೆಂದನು,

2<<ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ. ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ.

3ತಾಳ್ಮೆಯಿಂದಿರಿ, ನಾನೂ ಮಾತನಾಡುವೆನು, ಆಮೇಲೆ ಹಾಸ್ಯಮಾಡಿದರೂ ಮಾಡಿರಿ.

4ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿರುವೆನೆ? ನಾನೇಕೆ ಬೇಸರಗೊಳ್ಳಬಾರದು?

5ನನ್ನ ಕಡೆಗೆ ಗಮನಿಸಿ, ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ,

6ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ, ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ.

7ದುಷ್ಟರು ಬಾಳಿ ವೃದ್ಧರಾಗುವುದಕ್ಕೂ, ಬಲಿಷ್ಟರಾಗಿ ಪ್ರಬಲಿಸುವುದಕ್ಕೂ ಕಾರಣವೇನು?

8ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು.

9ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದ ಇರುವವು; ದೇವರ ದಂಡವು ಅವರ ಮೇಲೆ ಬೀಳದು.

10ಅವರ ಗೂಳಿಯು ಬೇಸರಗೊಳ್ಳದೆ ಸಂತತಿಯನ್ನು ಹುಟ್ಟಿಸುತ್ತದೆ; ಅವರ ಹಸುವು ಕಂದುಹಾಕದೆ ಈಯುವುದು.

11ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು, ಅವರ ಮಕ್ಕಳು ಕುಣಿದಾಡುವರು.

12ಅವರು ದಮ್ಮಡಿ ಕಿನ್ನರಿಗಳೊಡನೆ ಸ್ವರವೆತ್ತಿ, ಕೊಳಲಿನ ಧ್ವನಿಗೆ ಉಲ್ಲಾಸಪಡುವರು.

13ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು, ಕ್ಷಣಮಾತ್ರದಲ್ಲಿ ಸಮಾಧಾನದಿಂದ ಸಮಾಧಿಗೆ ಸೇರುವರು.

14ಆದರೆ ಇವರೇ ದೇವರನ್ನು ಕುರಿತು, <ನಮ್ಮಿಂದ ತೊಲಗಿ ಹೋಗು, ನಿನ್ನ ಮಾರ್ಗಗಳ ತಿಳಿವಳಿಕೆಯೇ ನಮಗೆ ಬೇಡ ಎಂದೂ

15ಆ ಸರ್ವಶಕ್ತನು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು? ಆತನಿಗೆ ವಿಜ್ಞಾಪನೆ ಮಾಡುವುದರಿಂದ ಪ್ರಯೋಜನವೇನು?> ಎಂದೂ ಹೇಳುತ್ತಿದ್ದರು.

16ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವುದಿಲ್ಲ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

17ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ? ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ? ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಾರಿ?

18ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸಾರಿ? ಎಷ್ಟು ಸಾರಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು?

19<ದೇವರು ದುಷ್ಟನ ಪಾಪ ಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ> ಎನ್ನುತ್ತೀರೋ, ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೇ ಕೊಟ್ಟುಬಿಡಲಿ.

20ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ, ಸರ್ವಶಕ್ತನ ರೌದ್ರರಸವನ್ನು ಪಾನಮಾಡಲಿ.

21ಅವನಿಗೆ ನೇಮಕವಾದ ದಿನಗಳು ಮುಗಿದುಹೋದ ಮೇಲೆ ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು?

22ಮೇಲಣ ಲೋಕದವರಿಗೂ, ನ್ಯಾಯತೀರಿಸುವ ದೇವರಿಗೂ ಜ್ಞಾನಬೋಧನೆಯನ್ನು ಮಾಡಬಹುದೇ?

23ಒಬ್ಬನು ಸಮೃದ್ಧನಾಗಿ, ತುಂಬಾ ಸುಖದಿಂದಲೂ, ನೆಮ್ಮದಿಯಿಂದಲೂ ಇರುವಾಗ ಸಾಯುವನು.

24ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವುದು, ಅವನ ಎಲಬುಗಳು ಮಜ್ಜೆಯಿಂದ ಸಾರವಾಗಿರುವುದು.

25ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ, ಮನೋವ್ಯಥೆಪಡುತ್ತಾ ಸಾಯುವನು.

26ಇಬ್ಬರೂ ಧೂಳಿನಲ್ಲಿ ಮಲಗುವರು, ಹುಳುಗಳು ಅವರನ್ನು ಮುತ್ತಿಕೊಳ್ಳುವವು.

27ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ, ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ.

28<ಪ್ರಧಾನನ ಮನೆ ಏನಾಯಿತು? ದುಷ್ಟರು ವಾಸಿಸಿದ ಗುಡಾರವೆಲ್ಲಿ?> ಎನ್ನುತ್ತೀರಷ್ಟೆ.

29ನೀವು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ? ಅವರು ಕೊಟ್ಟ ದೃಷ್ಟಾಂತಗಳಿಂದ,

30ಆಪತ್ತಿನ ದಿನದಲ್ಲಿ ದುಷ್ಟನು ಉಳಿದು, ಕೋಪವು ತುಂಬಿ ತುಳುಕುವ ದಿನದಲ್ಲಿ ತಪ್ಪಿಸಲ್ಪಡುವನು ಎಂಬುದು ನಿಮಗೆ ಗೊತ್ತಾಗಲಿಲ್ಲವೋ?

31ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು?

32ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು; ಅವನ ಸಮಾಧಿಗೆ ಕಾವಲಿಡುವರು.

33ಆ ಕಣಿವೆಯ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು. ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು, ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು.

34ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! ನಿಮ್ಮ ಉತ್ತರಗಳಲ್ಲಿ ಉಳಿದಿರುವುದು ಮಿತ್ರ ದ್ರೋಹವೇ.>>


  Share Facebook  |  Share Twitter

 <<  Job 21 >> 


Bible2india.com
© 2010-2024
Help
Dual Panel

Laporan Masalah/Saran