Bible 2 India Mobile
[VER] : [KANNADA]     [PL]  [PB] 
 <<  Proverbs 19 >> 

1ಕಪಟವಾಗಿ ಮಾತನಾಡುವ ಮೂಢನಿಗಿಂತಲೂ, ನಿರ್ದೋಷಿಯಾಗಿ ನಡೆಯುವ ದರಿದ್ರನೇ ಶ್ರೇಷ್ಠ.

2ತಿಳುವಳಿಕೆಯಿಲ್ಲದೆ ಕೋರುವುದು ಯುಕ್ತವಲ್ಲ, ದುಡುಕುವ ಕಾಲು ದಾರಿತಪ್ಪುವುದು.

3ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು, ಯೆಹೋವನ ಮೇಲೆ ಕುದಿಯುವನು.

4ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು, ಬಡವನಿಗೆ ಇದ್ದ ಸ್ನೇಹಿತನೂ ದೂರವಾಗುವನು.

5ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ತಪ್ಪಿಸಿಕೊಳ್ಳನು.

6ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು, ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ.

7ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು, ಹೌದು, ಮಿತ್ರರೂ ಅವನಿಗೆ ದೂರವಾಗುವರು. ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು.

8ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು, ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.

9ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ಹಾಳಾಗುವನು.

10ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ, ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ.

11ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.

12ರಾಜನ ರೋಷವು ಸಿಂಹದ ಗರ್ಜನೆ, ಅವನ ದಯೆಯು ಪೈರಿನ ಇಬ್ಬನಿ.

13ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ.

14ಮನೆಮಾರು, ಆಸ್ತಿಪಾಸ್ತಿಯು ಪಿತೃಗಳಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.

15ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು, ಸೋಮಾರಿಯು ಹಸಿವೆಗೊಳ್ಳುವನು.

16ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು.

17ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

18ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ,

19ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ, ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು.

20ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.

21ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ, ಯೆಹೋವನ ಸಂಕಲ್ಪವೇ ಈಡೇರುವುದು.

22ಇಷ್ಟವು ಔದಾರ್ಯದ ಪ್ರಮಾಣ, ಇದ್ದರೂ ಇಲ್ಲವೆಂದು ಸುಳ್ಳಾಡುವವನಿಗಿಂತಲೂ, ಏನೂ ಇಲ್ಲದವನೇ ಲೇಸು.

23ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು.

24ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು.

25ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು, ವಿವೇಕಿಯನ್ನು ಗದರಿಸು, ತಾನೇ ತಿಳುವಳಿಕೆಯನ್ನು ಗ್ರಹಿಸುವನು.

26ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು, ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು.

27ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ, ಉಪದೇಶ ಕೇಳುವುದನ್ನೇ ಬಿಟ್ಟುಬಿಡು.

28ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು, ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವುದು.

29ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.


  Share Facebook  |  Share Twitter

 <<  Proverbs 19 >> 


Bible2india.com
© 2010-2024
Help
Dual Panel

Laporan Masalah/Saran