Bible 2 India Mobile
[VER] : [KANNADA]     [PL]  [PB] 
 <<  Amos 4 >> 

1ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, <<ಪಾನಗಳನ್ನು ತರಿಸಿ, ಕುಡಿಯೋಣ>> ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.

2ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು: <<ಇಗೋ ನಿಮ್ಮನ್ನು ಕೊಂಡಿಗಳಿಂದಲೂ, ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ, ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.

3ಗೋಡೆಯಲ್ಲಿಯ ಬಿರುಕುಗಳ ಮೂಲಕ, ಪ್ರತಿಯೊಬ್ಬ ಸ್ತ್ರೀಯೂ ನೇರವಾಗಿ ತನ್ನ ಮುಂದೆಯೇ ಹೊರಟು ಹೋಗುವಳು, ಹರ್ಮೋನಿನ ದಿಕ್ಕಿನ ಕಡೆಗೆ ತಳ್ಳಲ್ಪಡುವಿರಿ>> ಇದು ಯೆಹೋವನ ನುಡಿ.

4<<ಬೇತೇಲಿಗೆ ಹೋಗಿ ದ್ರೋಹ ಮಾಡಿರಿ, ಗಿಲ್ಗಾಲಿನಲ್ಲಿ ಸೇರಿ ದ್ರೋಹವನ್ನು ಇನ್ನೂ ಹೆಚ್ಚಿಸಿರಿ. ಪ್ರತಿದಿನ ಬೆಳಿಗ್ಗೆ ನಿಮ್ಮ ಬಲಿಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ.

5ಹುಳಿಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮ ಮಾಡಿರಿ; ಕೊಟ್ಟ ಕಾಣಿಕೆಯನ್ನು ಪ್ರಕಟಿಸಿರಿ; ಸಾರಿಹೇಳಿರಿ, ಇಸ್ರಾಯೇಲರೇ ಹೀಗೆ ಮಾಡುವುದು ನಿಮಗೆ ಇಷ್ಟ>> ಇದು ಕರ್ತನಾದ ಯೆಹೋವನ ನುಡಿ.

6<<ನಿಮ್ಮ ಪಟ್ಟಣಗಳಲ್ಲಿ ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆಯೂ ಮತ್ತು ನಿಮ್ಮ ಸಕಲ ನಿವಾಸಗಳಲ್ಲಿ ಅನ್ನದ ಕೊರತೆಯಾಗುವ ಹಾಗು ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ>> ಇದು ಯೆಹೋವನ ನುಡಿ.

7<<ಸುಗ್ಗಿಗೆ ಮೂರು ತಿಂಗಳು ಕಳೆಯಬೇಕಾದಾಗಲೂ, ನಿಮಗೆ ಮಳೆಯನ್ನು ತಡೆದೆನು. ಒಂದು ಪಟ್ಟಣದ ಮೇಲೆ ಮಳೆಯಾಗುವಂತೆಯೂ, ಇನ್ನೊಂದು ಪಟ್ಟಣದ ಮೇಲೆ ಮಳೆಯಾಗದಂತೆಯೂ ಮಾಡಿದೆನು. ಒಂದು ಭಾಗದ ಹೊಲದಲ್ಲಿ ಮಳೆಯಾಯಿತು. ಮಳೆಯಾಗದ ಹೊಲದ ಭಾಗವು ಬಾಡಿಹೋಯಿತು.

8ಎರಡು ಅಥವಾ ಮೂರು ಪಟ್ಟಣದವರು ನೀರು ಕುಡಿಯುವುದಕ್ಕೆ ಮತ್ತೊಂದು ಪಟ್ಟಣಕ್ಕೆ ಬಳಲುತ್ತಾ ಹೋಗುತ್ತಿದ್ದರು, ಬಾಯಾರಿಕೆ ತೀರಲಿಲ್ಲ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ.>> ಇದು ಯೆಹೋವನ ನುಡಿ.

9<<ನಿಮ್ಮನ್ನು ಬೂದಿಯಿಂದಲೂ, ಬಿಸಿಗಾಳಿಯಿಂದಲೂ ಬಾಧಿಸಿದೆನು. ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷೆಯತೋಟಗಳನ್ನು, ಅಂಜೂರದ ಗಿಡಗಳನ್ನು, ನಿಮ್ಮ ಎಣ್ಣೆಯ ಮರಗಳನ್ನು ಮಿಡತೆಯು ತಿಂದುಬಿಟ್ಟಿತು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ>> ಇದು ಯೆಹೋವನು ನುಡಿ.

10<<ಐಗುಪ್ತದ ವ್ಯಾಧಿಗಳಂತಹ ವ್ಯಾಧಿಯನ್ನು ನಿಮ್ಮ ಮೇಲೆ ಕಳುಹಿಸಿದೆನು. ನಿಮ್ಮ ಯುವಕರನ್ನು ಖಡ್ಗದಿಂದ ಹತಿಸಿದೆನು, ನಿಮ್ಮ ಕುದರೆಗಳನ್ನು ಸೂರೆಮಾಡಿಸಿದೆನು, ನಿಮ್ಮ ದಂಡುಗಳ ದುರ್ವಾಸನೆ ನಿಮ್ಮ ಮೂಗಿಗೆ ಬಡಿಯುವಂತೆ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ>> ಇದು ಯೆಹೋವನ ನುಡಿ.

11<<ಸೊದೋಮ್ ಮತ್ತು ಗೊಮೋರಗಳನ್ನು ಕೆಡವಿದಂತೆ, ನಾನು ನಿಮ್ಮ ಪಟ್ಟಣಗಳನ್ನು ಕೆಡವಿಬಿಟ್ಟಿದ್ದೇನೆ. ಬೆಂಕಿ ಉರಿಯಿಂದ ಎಳೆದ ಕೊಳ್ಳೆಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ>> ಇದು ಯೆಹೋವನು ನುಡಿ.

12<<ಆದಕಾರಣ ಇಸ್ರಾಯೇಲೇ, ನಾನು ನಿನಗೆ ಮಾಡುತ್ತೇನೆ; ನಾನು ಮಾಡಬೇಕೆಂದಿರುವುದರಿಂದ, ಇಸ್ರಾಯೇಲೇ, ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ!

13ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು>> ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನಾಮಧೇಯ.


  Share Facebook  |  Share Twitter

 <<  Amos 4 >> 


Bible2india.com
© 2010-2024
Help
Dual Panel

Laporan Masalah/Saran