Bible 2 India Mobile
[VER] : [KANNADA]     [PL]  [PB] 
 <<  2 Samuel 15 >> 

1ಸ್ವಲ್ಪ ಕಾಲವಾದನಂತರ ಅಬ್ಷಾಲೋಮನು ತನಗೋಸ್ಕರ ಒಂದು ರಥವನ್ನು, ಕುದುರೆಗಳನ್ನೂ ತೆಗೆದುಕೊಂಡು, ತನ್ನ ಮುಂದೆ ಮೈಗಾವಲಾಗಿ ಓಡುವುದಕ್ಕೆ ಐವತ್ತು ಪುರುಷರನ್ನು ನೇಮಿಸಿದನು.

2ಅವನು ಹೊತ್ತಾರೆಯಲ್ಲಿ ಎದ್ದು ಊರ ಬಾಗಿಲಿನ ಬಳಿಯಲ್ಲಿ ನಿಂತುಕೊಳ್ಳುವನು. ಯಾರಾದರೂ ತಮ್ಮ ವ್ಯಾಜ್ಯವನ್ನು ತೀರಿಸಿಕೊಳ್ಳುವುದಕ್ಕಾಗಿ ಅರಸನ ಬಳಿಗೆ ಹೋಗುವುದನ್ನು ಅಬ್ಷಾಲೋಮನು ಕಂಡರೆ ಅಂಥವರನ್ನು ತನ್ನ ಬಳಿಗೆ ಕರೆದು, <<ನೀವು ಯಾವ ಊರಿನರವರು?>> ಎಂದು ಕೇಳುವನು. ಅವರು, <<ನಿನ್ನ ಸೇವಕರಾದ ನಾವು ಇಸ್ರಾಯೇಲರ ಒಂದು ಕುಲಕ್ಕೆ ಸೇರಿದವರು>> ಎಂದು ಉತ್ತರ ಕೊಡುವರು.

3ಆಗ ಅಬ್ಷಾಲೋಮನು, <<ನೋಡಿ ನಿಮ್ಮ ಕಾರ್ಯವು ಒಳ್ಳೆಯದೂ, ನ್ಯಾಯವಾದದ್ದೂ ಆಗಿದೆ. ಆದರೆ ವ್ಯಾಜ್ಯಗಳನ್ನು ವಿಚಾರಿಸುವುದಕ್ಕೆ ಅರಸನಿಂದ ಯಾರೂ ನೇಮಕವಾಗಿಲ್ಲ.

4ವ್ಯಾಜ್ಯವಾಗಲಿ, ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡೆದುಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು>> ಎಂದು ಹೇಳುವನು.

5ಯಾರಾದರೂ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದಕ್ಕೆ ಬಂದರೆ ಅಂಥವರನ್ನು ಕೂಡಲೆ ಕೈಚಾಚಿ ಅವರನ್ನು ಹಿಡಿದು ಮುದ್ದಿಡುವನು.

6ಅರಸನ ಬಳಿಗೆ ವ್ಯಾಜ್ಯಕ್ಕಾಗಿ ಬರುವ ಎಲ್ಲಾ ಇಸ್ರಾಯೇಲರಿಗೂ ಅಬ್ಷಾಲೋಮನು ಹೀಗೆಯೇ ಮಾಡಿ, ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು.

7ನಾಲ್ಕು ವರುಷಗಳಾದ ನಂತರ ಅಬ್ಷಾಲೋಮನು ಅರಸನಿಗೆ, <<ನಾನು ಯೆಹೋವನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವುದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ.

8ಅಪ್ಪಣೆಯಾಗಲಿ, ನಿನ್ನ ಸೇವಕನಾದ ನಾನು ಆರಮ್ ದೇಶದ ಗೆಷೂರಿನಲ್ಲಿದ್ದಾಗ ಯೆಹೋವನು ನನ್ನನ್ನು ತಿರುಗಿ ಯೆರೂಸಲೇಮಿಗೆ ಬರಮಾಡುವುದಾದರೆ ಆತನಿಗೆ ಒಂದು ವಿಶೇಷವಾದ ಆರಾಧನೆ ಮಾಡಿಸುವೆನೆಂದು ಹರಕೆಮಾಡಿದ್ದೇನೆ>> ಎಂದು ವಿಜ್ಞಾಪಿಸಿದನು.

9ಆಗ ಅರಸನು, <<ಹೋಗಿಬಾ, ನಿನಗೆ ಶುಭವಾಗಲಿ>> ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟು ಹೋದನು.

10ಆದರೆ ಅವನು ಗುಢಚಾರರನ್ನು ಕಳುಹಿಸಿ ಇಸ್ರಾಯೇಲರ ಎಲ್ಲಾ ಕುಲದವರಿಗೆ, <<ನೀವು ತೂತುರಿಯ ಧ್ವನಿಯನ್ನು ಕೇಳುತ್ತಲೇ <ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಅರ್ಭಟಿಸಿರಿ> >> ಎಂದು ಹೇಳಿಸಿದ್ದನು.

11ಅಬ್ಷಾಲೋಮನು ಯೆರೂಸಲೇಮಿನಿಂದ ಆರಾಧನೆಗೆಂದು ಇನ್ನೂರು ಜನರನ್ನು ಕರೆದುಕೊಂಡು ಹೋಗಿದ್ದನು. ಅವರು ಯಥಾರ್ಥ ಮನಸ್ಸಿನಿಂದ ಹೋದವರು. ಅವರಿಗೇನೂ ಗೊತ್ತಿರಲಿಲ್ಲ.

12ಇದಲ್ಲದೆ ಅವನು ಸಮಾಧಾನ ಯಜ್ಞವನ್ನು ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬುವನನ್ನು ಅವನ ಊರಾದ ಗೀಲೊವಿನಿಂದ ಬರುವಂತೆ ತಿಳಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದ್ದದರಿಂದ ಒಳಸಂಚು ಪ್ರಬಲವಾಗುತ್ತಾ ಹೋಯಿತು.

13ಇಸ್ರಾಯೇಲ್ಯರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನವು ದಾವೀದನಿಗೆ ಮುಟ್ಟಿತು.

14ಅವನು ಯೆರೂಸಲೇಮಿನಲ್ಲಿ ತನ್ನ ಸೇವಕರಿಗೆ, <<ಏಳಿರಿ, ಓಡಿಹೋಗೋಣ. ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ. ಅವನು ಅಕಸ್ಮಿಕವಾಗಿ ನಮ್ಮ ಮೇಲೆ ಬಿದ್ದು, ನಮಗೆ ದುರ್ಗತಿಯನ್ನು ಉಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸುವನು>> ಎಂದು ಹೇಳಿದನು.

15ಸೇವಕರು ಅರಸನಿಗೆ, <<ನಮ್ಮ ಒಡೆಯನಾದ ಅರಸನಿಗೆ ಸರಿ ತೋರಿದ್ದನ್ನು ಮಾಡಲು ನಾವು ಸಿದ್ಧರಾಗಿದ್ದೇವೆ>> ಎಂದು ಉತ್ತರ ಕೊಟ್ಟರು.

16ಆಗ ಅರಸನು ತನ್ನ ಅರಮನೆಕಾಯುವುದಕ್ಕಾಗಿ ಹತ್ತು ಮಂದಿ ಉಪಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರೆದುಕೊಂಡು ಹೊರಟನು.

17ಅರಸನು ಅವನ ಜೊತೆಯಲ್ಲಿ ಹೊರಟು ಹೋದ ಜನರೆಲ್ಲರೂ ಪಟ್ಟಣದ ಕಡೆಯ ಮನೆಯ ಬಳಿಯಲ್ಲಿ ಸ್ವಲ್ಪ ಹೊತ್ತು ನಿಂತರು.

18ದಾವೀದನೂ, ಅವನ ಎಲ್ಲಾ ಸೇವಕರೂ, ಎಲ್ಲಾ ಕೆರೇತ್ಯ ಮತ್ತು ಎಲ್ಲಾ ಪೆಲೇತ್ಯ ಎಂಬ ಕಾವಲು ದಂಡುಗಳೂ, ಗತ್ ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಗಿತ್ತೀಯರೂ ಅರಸನ ಮುಂದೆ ಹಾದು ಹೋದರು.

19ಆಗ ಅರಸನು ಗಿತ್ತೀಯನಾದ ಇತ್ತೈ ಎಂಬುವನಿಗೆ, <<ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನಾದ ಅಬ್ಷಾಲೋಮನ ಬಳಿಯಲ್ಲಿ ವಾಸಮಾಡು.

20ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವುದು. ಹೀಗಿರುವುದರಿಂದ ನಿನ್ನೆ ಬಂದಂಥ ನಿನ್ನನ್ನು ಕರೆದುಕೊಂಡು ಹೋಗಿ ಸುಮ್ಮನೆ ಏಕೆ ತಿರುಗಾಡಲಿಕ್ಕೆ ಹಚ್ಚಬೇಕು. ನಿನ್ನ ಸಹೋದರನನ್ನು ಕರೆದುಕೊಂಡು ಹಿಂದಿರುಗಿ ಹೋಗು. ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ>> ಎಂದು ಹೇಳಿದನು.

21ಅದಕ್ಕೆ ಇತ್ತೈ, <<ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಪ್ರಾಣ ಹೋದರೂ, ಉಳಿದರೂ ನನ್ನ ಒಡೆಯನಾದ ಅರಸನು ಇರುವಲೇ ಇರುವೆನು>> ಎಂದು ಉತ್ತರಕೊಟ್ಟನು.

22ಆಗ ದಾವೀದನು ಅವನಿಗೆ, <<ಒಳ್ಳೆಯದು, ಮುಂದೆ ನಡೆ>> ಎಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೇವಕರನ್ನೂ, ಕುಟುಂಬದವರನ್ನೂ ಕರೆದುಕೊಂಡು ಮುಂದೆ ನಡೆದನು.

23ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಮುತ್ತಲಿನ ಜನರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯ ಮಾರ್ಗವನ್ನು ಹಿಡಿದರು.

24ಚಾದೋಕನೂ ಅವನ ವಶದಲ್ಲಿದ್ದ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಅದನ್ನು ಜನರೆಲ್ಲರೂ ದಾಟಿಹೋಗುವವರೆಗೆ ಕೆಳಗಿಳಿಸಿದರು. ಎಬ್ಯಾತಾರನೂ ಬಂದಿದ್ದನು.

25ಅರಸನು ಚಾದೋಕನಿಗೆ, <<ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಿರುಗಿ ತೆಗೆದುಕೊಂಡು ಹೋಗು. ಯೆಹೋವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ ನಾನು ಆತನನ್ನೂ, ಆತನ ಆಲಯವನ್ನೂ ನೋಡುವ ಹಾಗೆ ಆತನೇ ನನ್ನನ್ನು ಪುನಃ ಬರಮಾಡುವನು.

26ಒಂದುವೇಳೆ ಆತನು <ನಿನ್ನಲ್ಲಿ ನನಗೆ ಇಷ್ಟವಿಲ್ಲ> ಎಂದುಕೊಂಡರೆ ಇಗೋ, ನಾನು ಇಲ್ಲಿದ್ದೇನೆ. ಆತನು ತನಗೆ ಸರಿ ಕಂಡಂತೆ ಮಾಡಲಿ>> ಎಂದನು.

27ಇದಲ್ಲದೆ ಆತನು ಯಾಜಕನಾದ ಚಾದೋಕನಿಗೆ, <<ನೀನು ದರ್ಶಿಯಲ್ಲವೇ? ನೀನು ನಿನ್ನ ಮಗನಾದ ಅಹೀಮಾಚನು ಮತ್ತು ಎಬ್ಯಾತಾರನ ಮಗನಾದ ಯೋನಾತಾನರು ಎಂಬ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಸಮಾಧಾನದಿಂದ ಪಟ್ಟಣಕ್ಕೆ ಹಿಂದಿರುಗು.

28ನಿಮ್ಮಿಂದ ವರ್ತಮಾನ ಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು>> ಎಂದು ಹೇಳಿದನು.

29ಆಗ ಚಾದೋಕನೂ ಮತ್ತು ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗಿ ಅಲ್ಲೇ ವಾಸ ಮಾಡಿದರು.

30ದಾವೀದನು ತಲೆಯನ್ನು ಮುಚ್ಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೆಮರದ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಗುಡ್ಡವನ್ನು ಏರಿದರು.

31ಅಬ್ಷಾಲೋಮನ ಸಂಗಡ ಒಳಸಂಚು ಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು, <<ಯೆಹೋವನೇ ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು>> ಎಂದು ಪ್ರಾರ್ಥಿಸಿದನು.

32ಅವನು ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ ಅರ್ಕಿಯನಾದ ಹೂಷೈ ಎಂಬುವವನು ಅಂಗಿಯನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅರಸನ ಬಳಿಗೆ ಬಂದನು.

33ಅರಸನು ಅವನಿಗೆ, <<ನೀನು ನನ್ನ ಸಂಗಡ ಬರುವುದಾದರೆ ನನಗೆ ಹೊರೆಯಾಗಿರುವೆ.

34ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ, ಅರಸನೇ, <ನಾನು ನಿನ್ನ ಸೇವಕನು; ಈ ಮೊದಲು ನಿನ್ನ ತಂದೆಯ ಸೇವೆ ಮಾಡಿದಂತೆ ಈಗ ನಿನ್ನ ಸೇವೆಯನ್ನು ಮಾಡುತ್ತೇನೆ> ಎಂದು ಹೇಳುವುದಾದರೆ, ಆಗ ನೀನು ಅಹೀತೋಫೆಲನ ಆಲೋಚನೆಯನ್ನು ನಿರರ್ಥಕಮಾಡುವುದಕ್ಕೆ ನನಗೋಸ್ಕರ ಅನುಕೂಲ ಮಾಡಿಕೊಟ್ಟಂತಾಗುವುದು.

35ಅಲ್ಲಿ ನಿನ್ನ ಸಂಗಡ ಚಾದೋಕ ಮತ್ತು ಎಬ್ಯಾತಾರನೂ ಇರುತ್ತಾರಲ್ಲಾ. ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲ ಆ ಇಬ್ಬರು ಯಾಜಕರಿಗೆ ತಿಳಿಸು. ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ.

36ಒಬ್ಬನು ಚಾದೋಕನ ಮಗನಾದ ಅಹೀಮಾಚನು ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರವಾಗಿ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು>> ಎಂದು ಹೇಳಿ ಅವನನ್ನು ಕಳುಹಿಸಿದನು.

37ಅಬ್ಷಾಲೋಮನು ಯೆರೂಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.


  Share Facebook  |  Share Twitter

 <<  2 Samuel 15 >> 


Bible2india.com
© 2010-2024
Help
Dual Panel

Laporan Masalah/Saran