Bible 2 India Mobile
[VER] : [KANNADA]     [PL]  [PB] 
 <<  2 Samuel 13 >> 

1ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಸುಂದರಿಯಾದ ಒಬ್ಬಳು ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.

2ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ತಾಮರಳು ಕನ್ಯೆಯಾಗಿದ್ದರಿಂದ ಆಕೆಗೆ ಏನು ಮಾಡಲು ಸಾಧ್ಯವಿಲ್ಲವೆಂದು ಅಮ್ನೋನನು ತಿಳಿದನು.

3ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗನು.

4ಬಹು ಯುಕ್ತಿವಂತನಾದ ಇವನು ಒಂದು ದಿನ ಅಮ್ನೋನನ್ನು, <<ರಾಜಪುತ್ರನೇ ನೀನು ದಿನೇ ದಿನೇ ಕ್ಷೀಣನಾಗುತ್ತಾ ಬರುವುದೇಕೆ? ನನಗೆ ತಿಳಿಸುವುದಿಲ್ಲವೋ>> ಎಂದು ಕೇಳಲು ಅವನು, <<ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹ ಉಂಟಾಗಿದೆ>> ಎಂದು ಉತ್ತರ ಕೊಟ್ಟನು.

5ಆಗ ಯೋನಾದಾಬನು ಅವನಿಗೆ, <<ನೀನು ಅಸ್ವಸ್ಥನಾದವನಂತೆ ಹಾಸಿಗೆಯ ಮೇಲೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ನೋಡುವುದಕ್ಕೆ ಬಂದಾಗ ಅವನಿಗೆ, <ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನಗಾಗಿ ಆಹಾರ ಸಿದ್ದಮಾಡುವುದಕ್ಕೆ ಕಳುಹಿಸು. ಆಕೆ ನನ್ನೆದುರಿನಲ್ಲಿಯೆ ಸಿದ್ಧಮಾಡಿ, ತನ್ನ ಕೈಯಿಂದಲೇ ಊಟಮಾಡಿಸಲಿ> ಎಂದು ಹೇಳು>> ಎಂದನು.

6ಅಮ್ನೋನನು ಅಸ್ವಸ್ಥನಾದಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, <<ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನ್ನ ಬಳಿಗೆ ಕಳುಹಿಸು. ಆಕೆ ನನಗೋಸ್ಕರ ನನ್ನ ಕಣ್ಣ ಮುಂದೆಯೇ ಆಹಾರವನ್ನು ಸಿದ್ಧಮಾಡಿಕೊಡುವುದಾದರೆ ಊಟಮಾಡುವೆನು>> ಎಂದು ಹೇಳದನು.

7ಆಗ ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, <<ನೀನು ನಿನ್ನ ಅಣ್ಣನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಆಹಾರವನ್ನು ಸಿದ್ಧಮಾಡು>> ಎಂದು ಹೇಳಿದನು.

8ಕೂಡಲೆ ಆಕೆಯು ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು. ಅವನು ಮಲಗಿದ್ದನು. ಆಕೆಯು ಹೋಗಿ ಹಿಟ್ಟು ತೆಗೆದುಕೊಂಡು ನಾದಿ, ಅವನ ಕಣ್ಣ ಮುಂದೆಯೇ ರೊಟ್ಟಿಗಳನ್ನು ಮಾಡಿದಳು.

9ಅನಂತರ ಆಕೆಯು ಅವುಗಳನ್ನು ಬಾಣಲೆಯಿಂದ ತೆಗೆದು, ಅವನ ಮುಂದೆ ಇಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.

10ಎಲ್ಲರೂ ಹೋದ ಮೇಲೆ ಅವನು ತಾಮಾರಳಿಗೆ, <<ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ>> ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಆಹಾರವನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.

11ಕೂಡಲೆ ಅವನು ಆಕೆಯನ್ನು ಹಿಡಿದು <<ನನ್ನ ತಂಗಿಯೇ ಬಂದು ನನ್ನ ಸಂಗಡ ಮಲಗಿಕೋ>> ಎಂದನು.

12ಆಕೆಯು; <<ಅಣ್ಣನೇ, ಬೇಡ, ನನ್ನನ್ನು ಅಪಮಾನಪಡಿಸಬೇಡ, ಇಸ್ರಾಯೇಲರಲ್ಲಿ ಇಂಥ ನೀಚಕಾರ್ಯವು ನಡೆಯಬಾರದು. ಇಂಥ ಅವಮಾನಕರವಾದ ಕೆಲಸವನ್ನು ಮಾಡಬೇಡ.

13ಈ ಅಪಮಾನವನ್ನು ನಾನು ಮರೆಮಾಡುವುದಾದರೂ ಹೇಗೆ? ನಿನಗಂತೂ ಇಸ್ರಾಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತನಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು>> ಎಂದಳು.

14ಆದರೆ ಅವನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.

15ಇದಾದ ಮೇಲೆ ಅವನಿಗೆ ಆಕೆಯ ಮೇಲೆ ದ್ವೇಷಹುಟ್ಟಿತು. ಅವಳ ಬಗ್ಗೆ ಇದ್ದ ಪ್ರೀತಿಗಿಂತ ಆಕೆಯ ಮೇಲಿನ ದ್ವೇಷವೇ ಹೆಚ್ಚಾಯಿತು.

16ಅಮ್ನೋನನು ಆಕೆಗೆ, <<ಎದ್ದು ಹೋಗು>> ಎಂದು ಹೇಳಿದಾಗ ಆಕೆಯು, <<ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ>> ಅಂದಳು.

17ಆದರೆ ಅವನು ಆಕೆಯ ಮಾತನ್ನು ಕೇಳದೆ, ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಆಳನ್ನು ಕರೆದು ಅವನಿಗೆ, <<ಇವಳನ್ನು ಹೊರಗೆ ತಳ್ಳಿ ಕದವನ್ನು ಮುಚ್ಚು>> ಎಂದು ಆಜ್ಞಾಪಿಸಿದನು.

18ಆಕೆಯು ನಾನಾ ವರ್ಣವುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಇದೇ ತರಹದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಆತನ ಸೇವಕರು ಆಕೆಯನ್ನು ಹೊರಗೆ ಕಳುಹಿಸಿ ಕದವನ್ನು ಮುಚ್ಚಿದನು.

19ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು ನಿಲುವಂಗಿಯನ್ನು ಹರಿದುಕೊಂಡು ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.

20ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, <<ನಿನ್ನ ಅಣ್ಣನಾದ ಅಮ್ನೋನನು ನಿನ್ನನ್ನು ಸಂಗಮಿಸಿದನೋ? ತಂಗಿ, ಈಗ ಸುಮ್ಮನಿರು. ಅವನು ನಿನ್ನ ಅಣ್ಣನಲ್ಲವೋ? ಈ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ>> ಎಂದು ಹೇಳಿದನು. ತಾಮಾರಳು ಒಂಟಿಯಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಮಾಡಿದಳು.

21ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಕೋಪಗೊಂಡನು.

22ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

23ಎರಡು ವರುಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.

24ಅವನು ಅರಸನ ಬಳಿಗೆ ಹೋಗಿ ಅವನನ್ನು, <<ಸ್ವಾಮೀ, ನಿನ್ನ ಸೇವಕನು ಕುರಿಗಳ ಉಣ್ಣೆ ಕತ್ತರಿಸುವವರನ್ನು ಕರೆಸಿದ್ದಾನೆ. ಅರಸನು ತನ್ನ ಸೇವಕರೊಡನೆ ಅವನ ಬಳಿಗೆ ಬರಲಿ>> ಎಂದು ಬೇಡಿಕೊಂಡನು.

25ಅರಸನು ಅವನಿಗೆ, <<ಮಗನೇ ಬೇಡ ನಾವೆಲ್ಲರೂ ಬಂದರೆ ನಿನಗೆ ಭಾರವಾದೀತು>> ಅನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಹೋಗಲಿಲ್ಲ. ಅವನನ್ನು ಆಶೀರ್ವದಿಸಿದನು ಅಷ್ಟೇ.

26ಆಗ ಅಬ್ಷಾಲೋಮನು, <<ನೀನು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ಕಳುಹಿಸು>> ಅಂದನು. ಅದಕ್ಕೆ ಅರಸನು, <<ಅವನೇಕೆ ನಿನ್ನ ಸಂಗಡ ಬರಬೇಕು?>> ಎಂದು ಕೇಳಿದನು.

27ಆದರೆ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನು ಕಳುಹಿಸಿದನು.

28ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, <<ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ. ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೇ? ಧೈರ್ಯದಿಂದಿರಿ ಮತ್ತು ಶೂರರಾಗಿರಿ>> ಎಂದು ಹೇಳಿದನು.

29ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಕತ್ತೆಗಳನ್ನು ಹತ್ತಿ ಓಡಿಹೋದರು.

30ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, <<ಅಬ್ಷಾಲೋಮನು ರಾಜಪುತ್ರರೆಲ್ಲರನ್ನು ಕೊಂದು ಹಾಕಿದನು ಒಬ್ಬನನ್ನೂ ಉಳಿಸಲಿಲ್ಲ>> ಎಂಬ ಸುದ್ದಿ ಮುಟ್ಟಿತು.

31ಆಗ ಅರಸನು ಎದ್ದು ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವನ ಹತ್ತಿರ ನಿಂತರು.

32ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, <<ರಾಜಪುತ್ರರೆಲ್ಲರನ್ನೂ ಕೊಂದು ಹಾಕಿದ್ದಾರೆಂದು ನನ್ನ ಒಡೆಯನು ನೆನಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಾಗಿನಿಂದ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದಲೇ ತೋರುತ್ತಿತ್ತು.

33ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸನು ಲಕ್ಷ್ಯಕೊಡದಿರಲಿ. ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ>> ಎಂದು ಹೇಳಿ ಸಂತೈಸಿದನು.

34ಅಬ್ಷಾಲೋಮನು ತಪ್ಪಿಸಿಕೊಂಡು ಓಡಿಹೋದನು. ಅಷ್ಟರಲ್ಲಿ ದಾರಿನೋಡುತ್ತಿದ್ದ ಕಾವಲುಗಾರನು, ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದು ಬರುವುದನ್ನು ಕಂಡನು.

35ಯೋನಾದಾಬನು ಅರಸನಿಗೆ, <<ಇಗೋ ರಾಜಕುಮಾರರು ಬರುತ್ತಿದ್ದಾರೆ. ನಿನ್ನ ಸೇವಕನ ಮಾತಿನಂತೆಯೆ ಆಯಿತಲ್ಲವೋ?>> ಎಂದು ಹೇಳಿ ಮುಗಿಯುವಷ್ಟರಲ್ಲಿ,

36ರಾಜಕುಮಾರರು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.

37ದಾವೀದನು ತನ್ನ ಮಗನಿಗೋಸ್ಕರ ಪ್ರತಿದಿನವೂ ದುಃಖಪಡುತ್ತಿದ್ದನು.

38ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರುಷ ಇದ್ದನು.

39ಅರಸನಾದ ದಾವೀದನು ಅಮ್ನೋನನ ಮರಣದ ವಿಷಯವಾಗಿ ಆದರಣೆಹೊಂದಿ ತನ್ನ ಮಗನಾದ ಅಬ್ಷಾಲೋಮನನ್ನು ನೋಡುವುದಕ್ಕಾಗಿ ಬಹಳ ಆಸೆಪಟ್ಟನು.


  Share Facebook  |  Share Twitter

 <<  2 Samuel 13 >> 


Bible2india.com
© 2010-2024
Help
Dual Panel

Laporan Masalah/Saran