Bible 2 India Mobile
[VER] : [KANNADA]     [PL]  [PB] 
 <<  1 Thessalonians 2 >> 

1ಸಹೋದರರೇ, ನಾವು ವ್ಯರ್ಥವಾಗಿ ನಿಮ್ಮಲ್ಲಿಗೆ ಬರಲಿಲ್ಲವೆಂಬುದು ನಿಮಗೆ ತಿಳಿದಿರುವ ಪ್ರಕಾರವೇ,

2ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ.

3ಯಾಕೆಂದರೆ ನಮ್ಮ ಬೋಧನೆಯು ತಪ್ಪಾದದ್ದಲ್ಲ, ಅಶುದ್ಧವಾದದ್ದೂ ಅಲ್ಲ, ಮೋಸವೂ ಅಲ್ಲ.

4ದೇವರು ನಮ್ಮನ್ನು ಯೋಗ್ಯರೆಂದೆಣಿಸಿ, ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಿದನು. ಆದುದರಿಂದ ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿಯಲ್ಲ ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತಿದ್ದೇವೆ.

5ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಯಾರ ಮುಖಸ್ತುತಿಯನ್ನೂ ಮಾಡಿಲ್ಲ ಮತ್ತು ದುರಾಶೆಯನ್ನು ಮರೆಮಾಡುವುಕ್ಕಾಗಿ ವೇಷವನ್ನು ಹಾಕಿಕೊಂಡಿಲ್ಲ. ಇದಕ್ಕೆ ದೇವರೇ ಸಾಕ್ಷಿ.

6ಇದಲ್ಲದೆ ನಾವು ಯೇಸು ಕ್ರಿಸ್ತನ ಅಪೊಸ್ತಲರಾಗಿರುವುದರಿಂದ ನಮಗೆ ಗೌರವವನ್ನು ತೋರಿಸಬೇಕೆಂದು ಹೇಳಬಹುದಾಗಿದ್ದರೂ, ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲಿ, ಇತರರಿಂದಾಗಲಿ ಪಡೆದುಕೊಳ್ಳಲು ಅಪೇಕ್ಷಿಸಲಿಲ್ಲ.

7ಆದರೆ ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ.

8ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಿಮಗಾಗಿ ಪ್ರಾಣವನ್ನೇ ಕೊಡಲೂ ಸಂತೋಷದಿಂದ ಸಿದ್ಧರಾಗಿದ್ದೆವು.

9ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ.

10ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ನಿರ್ಮಲರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವು ಮತ್ತು ದೇವರೂ ಸಾಕ್ಷಿಗಳಾಗಿದ್ದೀರಿ.

11ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ,

12ಧೈರ್ಯಪಡಿಸುತ್ತಾ ತನ್ನ ರಾಜ್ಯದಲ್ಲಿ ಮತ್ತು ಆತನ ಮಹಿಮೆಯಲ್ಲಿ ಪಾಲುಗಾರರಾಗುವುದಕ್ಕಾಗಿ ಕರೆಯುವ ದೇವರಿಗೆ ತಕ್ಕಹಾಗೆ ಯೋಗ್ಯರಾಗಿ ನೀವು ಜೀವಿಸಬೇಕೆಂದು ವಿಧಿಸಿದೆವೆಂಬುದು ನಿಮಗೇ ತಿಳಿದಿದೆ.

13ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಕೆಲಸ ಮಾಡುತ್ತದೆ.

14ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾಗಿದ್ದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ.

15ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು. ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.

16ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೂ ಅಡ್ಡಿಮಾಡುತ್ತಾರೆ. ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣಮಾಡುತ್ತಾರೆ. ಕಡೆಗೆ ದೇವರ ಕೋಪವು ಅವರ ಮೇಲೆ ಬರುತ್ತದೆ.

17ಸಹೋದರರೇ, ನಾವಂತೂ ಸ್ವಲ್ಪಕಾಲ ಮಾತ್ರ ನಿಮ್ಮಿಂದ ದೂರವಾಗಿದ್ದರೂ ಹೃದಯದಲ್ಲಿ ಅಗಲದೆ ನಿಮ್ಮನ್ನು ಮುಖಾಮುಖಿಯಾಗಿ ನೋಡುವುದಕ್ಕೆ ಅತಿಯಾದ ಆಸೆಯಿಂದ ಬಹಳ ಪ್ರಯತ್ನಿಸಿದೆವು.

18ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. ಆದರೆ ಸೈತಾನನು ನನಗೆ ಅಡ್ಡಿ ಮಾಡಿದನು.

19ನಮ್ಮ ಕರ್ತನಾದ ಯೇಸು ಹಿಂತಿರುಗಿ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆಯೂ, ನಮ್ಮ ಸಂತೋಷವೂ, ನಾವು ಹೊಗಳಿಕೊಳ್ಳುವ ಕಿರೀಟವೂ ಯಾರು? ನೀವೇ ಅಲ್ಲವೇ.

20ಹೀಗಿರಲಾಗಿ ನೀವೇ ನಮ್ಮ ಮಹಿಮೆ ಮತ್ತು ಸಂತೋಷವೂ ಆಗಿದ್ದೀರಿ.


  Share Facebook  |  Share Twitter

 <<  1 Thessalonians 2 >> 


Bible2india.com
© 2010-2024
Help
Dual Panel

Laporan Masalah/Saran