Bible 2 India Mobile
[VER] : [KANNADA]     [PL]  [PB] 
 <<  1 Samuel 9 >> 

1ಬೆನ್ಯಾಮೀನ್ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತ ಮತ್ತು ಪ್ರಭಾವಶಾಲಿಯಾದ ಮನುಷ್ಯನಿದ್ದನು. ಕೀಷನು ಅಬೀಯೇಲನ ಮಗ, ಅಬೀಯೇಲನು ಚೆರೋರನ ಮಗ, ಚರೋರತನ ಮೊಮ್ಮಗ ಹಾಗೂ ಅಫೀಹನ ಮರಿಮಗನು.

2ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಯೌವನಸ್ಥನೂ, ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾಗಿದ್ದನು.

3ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ತಪ್ಪಿಸಿಕೊಂಡು ಹೋದುದರಿಂದ ಅವನು ತನ್ನ ಮಗನಾದ ಸೌಲನಿಗೆ, <<ನೀನೆದ್ದು ಆಳುಗಳಲ್ಲಿ ಒಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕುವುದಕ್ಕೆ ಹೋಗು>> ಎಂದು ಹೇಳಿದನು.

4ಅದರಂತೆಯೇ ಅವನು ಹೊರಟು ಎಫ್ರಾಯೀಮ್ ಪರ್ವತಪ್ರಾಂತ್ಯ, ಶಾಲಿಸಾ ದೇಶ ಇವುಗಳಲ್ಲಿ ಸಂಚರಿಸಿ ಹುಡುಕಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾಮೀನ್ ಈ ಪ್ರಾಂತಗಳಲ್ಲಿಯೂ ಸಿಕ್ಕಲಿಲ್ಲ.

5ಕಡೆಗೆ ಅವರು ಚೂಫ್ ದೇಶಕ್ಕೆ ಬಂದಾಗ ಸೌಲನು ತನ್ನ ಆಳಿಗೆ, <<ಹಿಂದಿರುಗಿ ಹೋಗೋಣ ನಡಿ; ನಮ್ಮ ತಂದೆಯು ಈಗ ಕತ್ತೆಗಳ ಚಿಂತೆ ಬಿಟ್ಟು ನಮ್ಮ ಚಿಂತೆಯಲ್ಲಿರಬಹುದು>> ಅಂದನು

6ಆದರೆ ಆ ಆಳು,<<ಇಗೋ, ಈ ಪಟ್ಟಣದಲ್ಲಿ ಗೌರವಸ್ಥನಾದ ಒಬ್ಬ ದೇವರ ಮನುಷ್ಯನಿರುತ್ತಾನೆ. ಅವನು ನುಡಿಯುವುದೆಲ್ಲಾ ನೆರವೇರುತ್ತದೆ; ಅಲ್ಲಿಗೆ ಹೋಗೋಣ; ಒಂದು ವೇಳೆ ಅವನು ನಾವು ಹೋಗತಕ್ಕ ಮಾರ್ಗವನ್ನು ತಿಳಿಸುವನು>> ಎಂದನು.

7ಅದಕ್ಕೆ ಸೌಲನು, <<ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು?>>ಎನ್ನಲು

8ಆಳು, <<ಇಗೋ, ನನ್ನ ಕೈಯಲ್ಲಿ ಒಂದು ಪಾವಲಿಯಿದೆ (ಪಾವಲಿ ಎಂದರೆ ಒಂದು ಬೆಳ್ಳಿ ನಾಣ್ಯದ ಕಾಲು ಭಾಗ); ಇದನ್ನು ಅವನಿಗೆ ಕೊಡೋಣ; ಅವನು ನಮಗೆ ಮಾರ್ಗ ತೋರಿಸುವನು>> ಎಂದು ಉತ್ತರಕೊಟ್ಟನು.

9(ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರ ಕೇಳಬೇಕಾದರೆ <<ದೇವ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ>> ಎನ್ನುವರು. ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು, ಆ ಕಾಲದಲ್ಲಿ ದೇವದರ್ಶಿಗಳೆಂದು ಕರೆಯುತ್ತಿದ್ದರು.)

10ಆಗ ಸೌಲನು ಆಳಿಗೆ, <<ನೀನು ಹೇಳುವುದು ಒಳ್ಳೆಯದು; ಹೋಗೋಣ ನಡಿ>> ಅಂದನು.

11ಅವರಿಬ್ಬರೂ ಗುಡ್ಡವನ್ನು ಹತ್ತಿ ದೇವರ ಮನುಷ್ಯನಿದ್ದ ಪಟ್ಟಣವನ್ನು ಸಮೀಪಿಸಲು ನೀರು ಸೇದುವುದಕ್ಕೋಸ್ಕರ ಊರ ಹೊರಗೆ ಬಂದಿದ್ದ ಸ್ತ್ರೀಯರನ್ನು ಕಂಡು, <<ದರ್ಶಿಯು ಊರಲ್ಲಿದ್ದಾನೋ>> ಎಂದು ಕೇಳಿದರು. ಅವರು, <<ಇದ್ದಾನೆ;

12ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ಅವನು ಈಗಲೇ ಇಲ್ಲಿಗೆ ಬಂದಿರುವನು; ಬೇಗನೆ ಹೋಗಿರಿ.

13ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿಗೆ ಹೋಗುವ ವರೆಗೆ ಜನರು ಊಟಮಾಡುವುದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ. ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ. ಅವನು ಸಿಕ್ಕುವ ಸಮಯ ಇದೇ>> ಅಂದರು.

14ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವುದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.

15ಸೌಲನು ಬರುವುದಕ್ಕೆ ಒಂದು ದಿನ ಮುಂದಾಗಿ ಯೆಹೋವನು ಸಮುವೇಲನಿಗೆ,

16<<ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನ್ ದೇಶದ ಒಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು. ನೀನು ಅವನನ್ನು ಇಸ್ರಾಯೇಲರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. ಅವರ ಕೂಗು ನನಗೆ ಮುಟ್ಟಿತು; ಅವರನ್ನು ಕಟಾಕ್ಷಿಸಿದ್ದೇನೆ>> ಎಂದು ತಿಳಿಸಿದ್ದನು.

17ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, <<ನಾನು ತಿಳಿಸಿದ್ದ ಮನುಷ್ಯನು ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು>> ಎಂದು ಸೂಚಿಸಿದನು.

18ಊರಬಾಗಿಲಿಗೆ ಬಂದ ಸೌಲನು ತನ್ನ ಎದುರಿನಲ್ಲಿ ಸಮುವೇಲನನ್ನು ನೋಡಿ, <<ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿಯೋ?>> ಎನ್ನಲು ಸಮುವೇಲನು, <<ನಾನೇ ಆ ದರ್ಶಿ.

19ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.

20ಮೂರು ದಿನಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಇಸ್ರಾಯೇಲರ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು, ನಿನ್ನ ಮತ್ತು ನಿನ್ನ ತಂದೆಯ ಕುಟುಂಬದವರಿಗೂ ಸಲ್ಲುವುದು>> ಎಂದು ಹೇಳಿದನು.

21ಅದಕ್ಕೆ ಸೌಲನು, <<ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮಿನ್ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ?>> ಎಂದನು.

22ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರೆದುಕೊಂಡು ಹೋದನು; ಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ,

23<<ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು>> ಅಂದನು.

24ಅವನು ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟನು. ಆಗ ಸಮುವೆಲನು, <<ಇಗೋ, ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು, ಯಾಕೆಂದರೆ ಜನರನ್ನು ಬೋಜನಕ್ಕೆ ಕರೆದಾಗಿನಿಂದ ಇದು ನಿನಗೋಸ್ಕರವಾಗಿಯೇ ಇಡಲ್ಪಟ್ಟಿತ್ತು>> ಎಂದು ಸೌಲನಿಗೆ ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು.

25ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ ಮನೇ ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತನಾಡಿದನು.

26ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, <<ಏಳು, ನಿನ್ನನ್ನು ಕಳುಹಿಸಿ ರೋಡುತ್ತೇನೆ>> ಎಂದು ಎಬ್ಬಿಸಲು ಅವನು ಎದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ

27ಸಮುವೇಲನು ಸೌಲನಿಗೆ, <<ನಿನ್ನ ಸೇವಕನನ್ನು ಮುಂದೆ ಕಳುಹಿಸಿ ನೀನು ಇಲ್ಲಿ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿ ಒಂದುಂಟು>> ಎಂದನು.


  Share Facebook  |  Share Twitter

 <<  1 Samuel 9 >> 


Bible2india.com
© 2010-2024
Help
Dual Panel

Laporan Masalah/Saran