Bible 2 India Mobile
[VER] : [KANNADA]     [PL]  [PB] 
 <<  1 Samuel 26 >> 

1ಜೀಫ್ಯರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು ಅವನಿಗೆ, <<ದಾವೀದನು ಅರಣ್ಯದ ಮೂಡಣ ದಿಕ್ಕಿನಲ್ಲಿರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿರುವುದು ನಿನಗೆ ಗೊತ್ತಿಲ್ಲವೋ?>> ಅಂದರು.

2ಆಗ ಸೌಲನು ಇಸ್ರಾಯೇಲರಲ್ಲಿ ಶ್ರೇಷ್ಟರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ದಾವೀದನನ್ನು ಹುಡುಕುವುದಕ್ಕೋಸ್ಕರ ಜೀಫ್ ಅರಣ್ಯಕ್ಕೆ ಹೋಗಿ ಅದರ ಮೂಡಣದಿಕ್ಕಿನಲ್ಲಿ,

3ದಾರಿಯ ಬಳಿಯಲ್ಲಿರುವ ಹಕೀಲಾ ಬೆಟ್ಟದಲ್ಲಿ ಪಾಳೆಯಮಾಡಿಕೊಂಡರು. ಸೌಲನು ತನ್ನನ್ನು ಹಿಡಿಯುವುದಕ್ಕೋಸ್ಕರ ಅರಣ್ಯಕ್ಕೆ ಬಂದಿದ್ದಾನೆಂಬ ವರ್ತಮಾನವು ಅಲ್ಲಿಯೇ ಇದ್ದ ದಾವೀದನಿಗೆ ತಲುಪಲು

4ಅವನು ಕೂಡಲೇ ಗೂಡಾಚಾರರನ್ನು ಕಳುಹಿಸಿ ಸೌಲನು ಇಳಿದುಕೊಂಡಿದ್ದ ಸ್ಥಳವನ್ನು ಗೊತ್ತುಮಾಡಿಕೊಂಡನು.

5ಅನಂತರ ತಾನಗಿಯೇ ಸೌಲನ ಪಾಳೆಯದ ಹತ್ತಿರ ಹೋಗಿ, ಸೌಲನೂ, ನೇರನ ಮಗನಾದ ಅವನ ಸೇನಾಪತಿ ಅಬ್ನೇರನೂ ಮಲಗಿದ್ದ ಸ್ಥಳಗಳನ್ನು ಕಂಡುಹಿಡಿದನು. ಸೌಲನು ರಥಗಳನ್ನು ಬಿಟ್ಟಿರುವ ಸ್ಥಳಮಧ್ಯದಲ್ಲಿ ಮಲಗಿದ್ದನು. ಅವನ ಸುತ್ತಲೂ ಸೈನಿಕರು ಇದ್ದರು.

6ಆಗ ದಾವೀದನು ಹಿತ್ತಿಯನ ಮಗನಾದ ಅಹೀಮೆಲೆಕನಿಗೂ, ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ, <<ನಿಮ್ಮಲ್ಲಿ ನನ್ನ ಸಂಗಡ ಸೌಲನ ಪಾಳೆಯಕ್ಕೆ ಯಾರು ಬರುವಿರಿ?>> ಎಂದು ಕೇಳಿದ್ದಕ್ಕೆ ಅಬೀಷೈಯು, <<ನಾನು ಬರುತ್ತೇನೆ>> ಎಂದು ಉತ್ತರ ಕೊಟ್ಟನು.

7ದಾವೀದನೂ ಮತ್ತು ಅಬೀಷೈಯೂ ರಾತ್ರಿಯಲ್ಲಿ ಆ ಪಾಳೆಯಕ್ಕೆ ಹೋದಾಗ ಸೌಲನು ಬಂಡಿಗಳ ಗುಂಪಿನ ಮಧ್ಯದಲ್ಲಿ ಮಲಗಿಕೊಂಡು ನಿದ್ರೆಮಾಡುತ್ತಿದ್ದನು. ಅವನ ಬರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಅಬ್ನೇರನೂ, ಸೈನಿಕರೂ ಅವನ ಸುತ್ತಲೂ ಮಲಗಿದ್ದರು.

8ಅಬೀಷೈಯು ದಾವೀದನಿಗೆ, <<ದೇವರು ಈ ಹೊತ್ತು ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿದ್ದಾನೆ, ಅಪ್ಪಣೆಯಾಗಲಿ ನಾನು ಬರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯುವೆನು. ಎರಡನೆಯ ಸಾರಿ ಹೊಡೆಯುವಂತ ಅವಕಾಶವಿರುವುದಿಲ್ಲ>> ಎಂದು ಹೇಳಿದನು.

9ಆದರೆ ದಾವೀದನು, <<ಅವನನ್ನು ಕೊಲ್ಲಬೇಡ, ಯೆಹೋವನ ಅಭಿಷಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನಾದರೂ ನಿರಪರಾಧಿಯೆಂದು ಪರಿಗಣಿಸಲ್ಪಡುವುಡಿಲ್ಲ?>> ಅಂದನು.

10ಇದಲ್ಲದೆ ದಾವೀದನು, <<ಯೆಹೋವನ ಆಣೆ, ಅವನು ಯೆಹೋವನಿಂದ ಸಾಯುವನು, ಇಲ್ಲವೆ ಕಾಲ ತುಂಬಿದ ಮೇಲೆ ಮರಣ ಹೊಂದುವನು ಅಥವಾ ಯುದ್ಧದಲ್ಲಿ ಸಾಯುವನು.

11ತನ್ನ ಅಭಿಷಕ್ತನಿಗೆ ಕೈಯೆತ್ತದಂತೆ ಯೆಹೋವನು ನನ್ನನ್ನು ತಡೆಯಲಿ. ಈಗ ಅವನ ತಲೆಯ ಬಳಿಯಲ್ಲಿರುವ ಬರ್ಜಿಯನ್ನು, ನೀರಿನ ತಂಬಿಗೆಯನ್ನೂ ತೆಗೆದುಕೊಂಡು ಹೋಗೋಣ>> ಎಂದು ಹೇಳಿ

12ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಬರ್ಜಿ ಮತ್ತು ನೀರಿನ ತಂಬಿಗೆಯನ್ನು ತೆಗೆದುಕೊಂಡು ಹೋದರು. ಯಾರೂ ನೋಡಲಿಲ್ಲ, ಯಾರಿಗೂ ಗೊತ್ತಾಗಲಿಲ್ಲ, ಯಾರೂ ಎಚ್ಚರವಾಗಲಿಲ್ಲ. ಏಕೆಂದರೆ ಯೆಹೋವನು ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದನು. ಒಬ್ಬರಿಗೂ ಎಚ್ಚರವಿಲ್ಲದೆ ಎಲ್ಲರೂ ನಿದ್ರೆಮಾಡುತ್ತಿದ್ದರು.

13ದಾವೀದನು ತನಗೂ ಪಾಳೆಯಕ್ಕೂ ತಕ್ಕಷ್ಟು ಅಂತರವಿರುವ ಹಾಗೆ ಸ್ವಲ್ಪ ದೂರಕ್ಕೆ ಹೋಗಿ ಗುಡ್ಡವನ್ನೇರಿ ತುದಿಯಲ್ಲಿ ನಿಂತು,

14<<ಅಬ್ನೇರನೇ ಕಿವಿಗೊಡುವುದಿಲ್ಲವೋ?>> ಎಂದು ನೇರನ ಮಗನಾದ ಅವನಿಗೂ, ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, <<ಅರಸನನ್ನು ಕೂಗುವ ನೀನಾರು?>> ಎಂದು ಕೇಳಿದನು.

15ದಾವೀದನು ಅಬ್ನೇರನಿಗೆ, <<ನೀನು ಶೂರನಲ್ಲವೋ? ಇಸ್ರಾಯೇಲರಲ್ಲಿ ನಿನಗೆ ಸಮಾನನಾದವನು ಯಾರು? ನೀನು ನಿನ್ನ ಒಡೆಯನಾದ ಅರಸನನ್ನು ಯಾಕೆ ಕಾಯಲಿಲ್ಲ. ಜನರಲ್ಲೊಬ್ಬನು ಒಳಕ್ಕೆ ಹೊಕ್ಕು ನಿನ್ನ ಒಡೆಯನಾದ ಅರಸನನ್ನು ಕೊಲ್ಲಬೇಕೆಂದಿದ್ದನು.

16ನೀನು ಹೀಗೆ ಮಾಡುವುದು ಸರಿಯಲ್ಲ. ಯೆಹೋವನಾಣೆ, ಆತನ ಅಭಿಷಕ್ತನಾಗಿರುವ ನಿಮ್ಮ ಒಡೆಯನನ್ನು ಕಾಯದಿರುವ ನೀವು ಮರಣಕ್ಕೆ ಪಾತ್ರರೇ ಹೌದು. ಅರಸನ ತಲೆಯ ಬಳಿಯಲ್ಲಿದ್ದ ಬರ್ಜಿಯೂ ತಂಬಿಗೆಯೂ ಏನಾದವೋ ನೋಡು>> ಎಂದು ಕೂಗಿ ಹೇಳಿದನು.

17ಸೌಲನು ದಾವೀದನ ಸ್ವರದ ಗುರುತು ಹಿಡಿದು ಅವನನ್ನು, <<ದಾವೀದನೇ ನನ್ನ ಮಗನೇ, ಇದು ನಿನ್ನ ಸ್ವರವೋ>> ಎಂದು ಕೇಳಲು ಆವನು, <<ಅರಸನೇ, ನನ್ನ ಒಡಯನೇ ಹೌದು, ನನ್ನ ಸ್ವರವೇ,

18ನನ್ನ ಸ್ವಾಮಿಯು ತನ್ನ ಸೇವಕನನ್ನು ಈ ಪ್ರಕಾರ ಹಿಂಸಿಸುವುದೇಕೇ? ನಾನೇನು ಮಾಡಿದೆನು?

19ಯಾವ ಪಾಪಕ್ಕೆ ಕೈಹಾಕಿದೆನು? ನನ್ನ ಅರಸನಾದ ಒಡೆಯನು ದಯವಿಟ್ಟು ತನ್ನ ಸೇವಕನ ಮಾತುಗಳನ್ನು ಲಾಲಿಸಬೇಕು. ನಿನ್ನನ್ನು ನನಗೆ ವಿರೋಧವಾಗಿ ಎಬ್ಬಿಸಿದವನು ಯೆಹೋವನೇ ಆಗಿರುವ ಪಕ್ಷದಲ್ಲಿ, ಆತನಿಗೆ ಘಮಘಮಿಸುವ ನೈವೇದ್ಯವನ್ನು ಅಂಗೀಕರಿಸಬೇಕು. ಮನುಷ್ಯರಾಗಿದ್ದರೆ ಯೆಹೋವನ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರಾಗಿರಲಿ ಯಾಕೆಂದರೆ ಯೆಹೋವನ ಸ್ವಾಸ್ಥ್ಯದಲ್ಲಿ ನನಗೆ ಪಾಲು ಸಿಕ್ಕದಂತೆ <ಹೋಗಿ ಅನ್ಯದೇವತೆಗಳನ್ನು ಸೇವಿಸು> ಎಂದು ನನ್ನನ್ನು ತಳ್ಳಿಬಿಟ್ಟರು.

20ಯೆಹೋವನ ಸಾನಿಧ್ಯವಿಲ್ಲದಿರುವ ದೇಶದಲ್ಲಿ ನನ್ನ ರಕ್ತವು ಸುರಿಸಲ್ಪಡದಿರಲಿ. ಅಯ್ಯೋ ಗುಡ್ಡಗಳಲ್ಲಿ ಕೌಜುಗವನ್ನು ಹಿಡಿಯಲು ಹೊರಟ ಬೇಟೆಗಾರನೋ ಎಂಬಂತೆ ಇಸ್ರಾಯೇಲರ ಅರಸನು ಹೊರಟು ಬಂದು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನಲ್ಲಾ>> ಅಂದನು.

21ಆಗ ಸೌಲನು ಅವನಿಗೆ, <<ನಾನು ಪಾಪಮಾಡಿದೆನು, ದಾವೀದನೇ ನನ್ನ ಮಗನೇ ಹಿಂದಿರುಗಿ ಬಾ. ಈ ಹೊತ್ತು ನನ್ನ ಜೀವವು ನಿನ್ನ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದೆಂದು ಎಣಿಸಲ್ಪಟ್ಟಿತು. ಆದ್ದರಿಂದ ನಾನು ಇನ್ನು ಮುಂದೆ ನಿನಗೆ ಕೇಡುಮಾಡುವುದಿಲ್ಲ. ಈ ವರೆಗೆ ನಾನು ಮಾಡಿದ್ದು ಹುಚ್ಚುತನವೂ ದೊಡ್ಡ ತಪ್ಪೂ ಆಗಿದೆ>> ಎಂದು ಹೇಳಿದನು

22ದಾವೀದನು ಅರಸನಿಗೆ, <<ಅರಸನೇ, ಇಗೋ ನಿನ್ನ ಬರ್ಜಿ ಇಲ್ಲಿದೆ, ಸೇವಕರಲ್ಲೊಬ್ಬನು ಬಂದು ಅದನ್ನು ತೆಗೆದುಕೊಂಡು ಹೋಗಲಿ.

23ಯೆಹೋವನು ಪ್ರತಿಯೊಬ್ಬನಿಗೂ ಅವನವನ ನೀತಿಸತ್ಯತೆಗಳಿಗೆ ಅನುಸಾರವಾಗಿ ಪ್ರತಿಫಲವನ್ನು ಕೊಡುವನು. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ, ನೀನು ಯೆಹೋವನ ಅಭಿಷಕ್ತನೆಂದು ನಾನು ನಿನ್ನ ಮೇಲೆ ಕೈಹಾಕಲಿಲ್ಲ.

24ನಾನು ಈ ಹೊತ್ತು ನಿನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿದಂತೆ ಯೆಹೋವನು ನನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿ, ಎಲ್ಲಾ ಇಕ್ಕಟ್ಟಿನಿಂದ ಬಿಡಿಸಲಿ>> ಎಂದನು.

25ಆಗ ಸೌಲನು ದಾವೀದನಿಗೆ, <<ನನ್ನ ಮಗನೇ ದಾವೀದನೇ ನೀನು ಆಶೀರ್ವಾದ ಹೊಂದು. ನೀನು ಹೇಗೂ ಮಹಾಕಾರ್ಯಗಳನ್ನು ನಡಿಸಿ ಸಫಲನಾಗುವಿ>> ಎಂದು ಹೇಳಿ ತನ್ನ ಊರಿಗೆ ಹೊರಟನು. ದಾವೀದನು ತನ್ನ ದಾರಿಯನ್ನು ಹಿಡಿದನು.


  Share Facebook  |  Share Twitter

 <<  1 Samuel 26 >> 


Bible2india.com
© 2010-2024
Help
Dual Panel

Laporan Masalah/Saran