Bible 2 India Mobile
[VER] : [KANNADA]     [PL]  [PB] 
 <<  1 Samuel 21 >> 

1ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಭಯಭಕ್ತಿಯಿಂದ ಎದುರುಗೊಂಡು, <<ನಿನ್ನ ಜೊತೆಯಲ್ಲಿ ಒಬ್ಬನಾದರೂ ಇಲ್ಲವಲ್ಲಾ, ನೀನು ಒಬ್ಬನೇ ಬಂದದ್ದೇಕೆ?>> ಎಂದು ಅವನನ್ನು ಕೇಳಿದನು.

2ಅವನು, <<ಅರಸನು ಒಂದು ಕೆಲಸವನ್ನು ಆಜ್ಞಾಪಿಸಿ, ಇದನ್ನು ಯಾರಿಗೂ ತಿಳಿಸಬಾರದೆಂದು ನನ್ನನ್ನು ಕಳುಹಿಸಿದ್ದಾನೆ. ನನ್ನ ಆಳುಗಳು ಇಂತಿಂಥ ಸ್ಥಳದಲ್ಲಿ ನನ್ನನ್ನು ಸಂಧಿಸಬೇಕೆಂದು ಗೊತ್ತುಮಾಡಿದ್ದಾನೆ.

3ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ನಾಲ್ಕೈದು ರೊಟ್ಟಿಗಳಾದರೂ, ಬೇರೆ ಯಾವ ಆಹಾರಪದಾರ್ಥವಾದರೂ ಇದ್ದರೆ ನನಗೆ ಕೊಟ್ಟುಬಿಡು>> ಎಂದನು.

4ಯಾಜಕನು ದಾವೀದನಿಗೆ, <<ನನ್ನ ಬಳಿಯಲ್ಲಿ ಮೀಸಲು ರೊಟ್ಟಿಗಳು ಹೊರತು ಬೇರೆ ರೊಟ್ಟಿಗಳಿಲ್ಲ. ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು>> ಎಂದನು.

5ದಾವೀದನು, <<ನಮ್ಮ ಎಲ್ಲಾ ಯುದ್ಧ ಪ್ರಯಾಣಗಳಲ್ಲಿ ಸ್ತ್ರೀಸಂಗವನ್ನು ನಿಷೇಧಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣ ಕಾರ್ಯಕ್ಕೆ ಹೊರಟಾಗಲೂ ಆಳುಗಳು, ಸಾಮಾನುಗಳು ಪರಿಶುದ್ಧವಾಗಿರುತ್ತವೆ. ಈ ದಿನದಲ್ಲಿ ಅವು ಎಷ್ಟೋ ಹೆಚ್ಚಾಗಿ ಪರಿಶುದ್ಧವಾಗಿರುತ್ತದಲ್ಲವೇ>> ಎಂದು ಉತ್ತರ ಕೊಟ್ಟನು

6ಬಿಸಿರೊಟ್ಟಿಗಳನ್ನು ಅರ್ಪಿಸಿದ ಆ ದಿನಗಳಲ್ಲಿ ಯೆಹೋವನ ಸನ್ನಿಧಿಯಿಂದ ತೆಗೆಯಲ್ಪಟ್ಟ ನೈವೇಧ್ಯವಾದ ಮೊದಲ ರೊಟ್ಟಿಗಳ ಹೊರತು ಅಲ್ಲಿ ಬೇರೆ ರೊಟ್ಟಿಗಳು ಇರಲಿಲ್ಲವಾದ್ದರಿಂದ, ಯಾಜಕನು ಆ ಪರಿಶುದ್ದವಾದ ರೊಟ್ಟಿಗಳನ್ನೇ ಕೊಟ್ಟುಬಿಟ್ಟನು.

7ಅದೇ ದಿನ ಸೌಲನ ಪಶುಪಾಲರಲ್ಲಿ ಪ್ರಧಾನನಾದ ದೋಯೇಗನೆಂಬ ಎದೋಮ್ಯನು ಯೆಹೋವನ ಆಲಯದಲ್ಲಿ ಉಳಿದುಕೊಂಡಿದ್ದನು.

8ದಾವೀದನು ಅಹೀಮಲೇಕನನ್ನು, <<ಅರಸನ ಕಾರ್ಯವು ತುರ್ತಾದ್ದರಿಂದ ಕತ್ತಿಯನ್ನಾಗಲಿ, ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲಿಲ್ಲ, ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ?>> ಎಂದು ಕೇಳಿದನು.

9ಅವನು, <<ನೀನು ಏಲಾ ತಗ್ಗಿನಲ್ಲಿ ಕೊಂದು ಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯು ಒಂದು ಬಟ್ಟೆಯಲ್ಲಿ ಸುತ್ತಲ್ಪಟ್ಟು, ಏಫೋದಿನ ಹಿಂದೆ ಇಡಲ್ಪಟ್ಟಿದೆ. ಬೇಕಾದರೆ ಅದನ್ನು ತೆಗೆದುಕೊ. ಅದರ ಹೊರತು ನನ್ನ ಬಳಿಯಲ್ಲಿ ಬೇರೊಂದಿಲ್ಲ>> ಎಂದು ಉತ್ತರಕೊಟ್ಟನು. ದಾವೀದನು, <<ಅದಕ್ಕೆ ಸಮಾನವಾದದ್ದು ಮತ್ತೊಂದಿಲ್ಲ. ಅದನ್ನೇ ಕೊಡು>> ಎಂದು ಹೇಳಿ ತೆಗೆದುಕೊಂಡನು.

10ದಾವೀದನನು ಸೌಲನ ಭಯದಿಂದ ಅದೇ ದಿನ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು.

11ಆಕೀಷನ ಸೇವಕರು, <<ಸೌಲನು ಸಾವಿರಾರು ಶತ್ರುಗಳನ್ನು ಕೊಂದನು, ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು ಎಂಬುದಾಗಿ ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಇವನ ಕುರಿತಲ್ಲವೋ?>> ಎಂದು ಮಾತನಾಡಿಕೊಂಡರು.

12ದಾವೀದನು ಈ ಮಾತುಗಳನ್ನು ಕೇಳುತ್ತಲೇ ಗತ್ ಊರಿನ ಅರಸನಾದ ಆಕೀಷನಿಗೆ ಬಹಳವಾಗಿ ಹೆದರಿ,

13ಅವನ ಸೇವಕರ ಮುಂದೆ ತನ್ನ ಬುದ್ದಿಯನ್ನು ಮಾರ್ಪಡಿಸಿಕೊಂಡು, ಗಡ್ಡದ ಮೇಲೆಲ್ಲಾ ಜೊಲ್ಲು ಸುರಿಸುತ್ತಾ, ಬಾಗಿಲುಗಳನ್ನು ಕೆರೆಯುತ್ತಾ, ತನ್ನನ್ನು ಹುಚ್ಚನಂತೆ ನಟಿಸಿದನು.

14ಆಗ ಆಕೀಷನು ತನ್ನ ಸೇವಕರಿಗೆ, <<ಈ ಮನುಷ್ಯನು ಹುಚ್ಚನೆಂದು ನಿಮಗೆ ಕಾಣುವುದಿಲ್ಲವೋ, ಇವನನ್ನು ನನ್ನ ಹತ್ತಿರ ಯಾಕೆ ತಂದಿರಿ?

15ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಬೇಸರಗೊಳಿಸುವುದಕ್ಕಾಗಿ ಇವನನ್ನು ತಂದಿರೋ? ಇಂಥವನೂ ನನ್ನ ಮನೆಗೆ ಬರಬೇಕೋ?>> ಅಂದನು.


  Share Facebook  |  Share Twitter

 <<  1 Samuel 21 >> 


Bible2india.com
© 2010-2024
Help
Dual Panel

Laporan Masalah/Saran