Bible 2 India Mobile
[VER] : [KANNADA]     [PL]  [PB] 
 <<  1 Samuel 15 >> 

1ಸಮುವೇಲನು ಸೌಲನಿಗೆ, <<ಯೆಹೋವನು ನಿನ್ನನ್ನು ತನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆ ಅರಸನನ್ನಾಗಿ ಅಭಿಷೇಕಿಸುವುದಕ್ಕೋಸ್ಕರ ನನ್ನನ್ನೇ ಕಳುಹಿಸಿದನಲ್ಲಾ; ಆತನು ಈಗ ಹೇಳುವುದನ್ನು ಕೇಳು.

2ಸೇನಾಧೀಶ್ವರನಾದ ಯೆಹೋವನು ನಿನಗೆ, <ಇಸ್ರಾಯೇಲರು ಐಗುಪ್ತದಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದ್ದನ್ನು ನೆನಪುಮಾಡಿಕೊಂಡು ನಾನು ಅವರಿಗೆ ಮುಯ್ಯಿತೀರಿಸುವೆನು.

3ಈಗ ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವುದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಶಿಶುಗಳನ್ನೂ, ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನೂ ಕನಿಕರವಿಲ್ಲದೆ ಕೊಂದುಹಾಕು ಎಂದು ಹೇಳುತ್ತಾನೆ> >> ಅಂದನು.

4ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ ಲೆಕ್ಕಿಸಲು ಎರಡು ಲಕ್ಷ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತು ಸಾವಿರ ಜನರು ಇದ್ದರು.

5ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೆ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚುಹಾಕುತ್ತಿದ್ದನು.

6ಆದರೆ ಅವನು ಕೇನ್ಯರಿಗೆ, <<ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿರಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ. ಇಸ್ರಾಯೇಲರು ಐಗುಪ್ತದಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರಲ್ಲಾ>> ಎಂದು ಹೇಳಿಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು.

7ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತ್ಯದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೆ ಅವರನ್ನು ಸಂಹರಿಸುತ್ತಾ ಹೋದನು.

8ಅವರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದು, ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು.

9ಸೌಲನೂ ಮತ್ತು ಇಸ್ರಾಯೇಲರೂ ಅಗಾಗನನ್ನೂ, ಉತ್ತಮವಾದ ಕುರಿದನಗಳನ್ನೂ, ಕುರಿಮರಿಗಳನ್ನೂ, ಕೊಬ್ಬಿದ ಪಶುಗಳನ್ನೂ, ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡಲು ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟರು.

10ಯೆಹೋವನು ಸಮುವೇಲನಿಗೆ, <<ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ವಿಷಾದಿಸುತ್ತೇನೆ. ಅವನು ನನ್ನನ್ನು ಬಿಟ್ಟುಬಿಟ್ಟನು; ನನ್ನ ಆಜ್ಞೆಗಳನ್ನು ನೆರವೇರಿಸಲಿಲ್ಲ>> ಎಂದು ಹೇಳಿದನು.

11ಸಮುವೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವನಿಗೆ ಮೊರೆಯಿಟ್ಟನು.

12ಸಮುವೇಲನು ಬೆಳಿಗ್ಗೆ ಎದ್ದು ಸೌಲನನ್ನು ನೋಡುವುದಕ್ಕೆ ಹೊರಟಾಗ ಅವನಿಗೆ, <<ಸೌಲನು ಕರ್ಮೆಲಿಗೆ ಹೋಗಿ ಅಲ್ಲಿ ತನಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ಗಟ್ಟಾ ಇಳಿದು ಗಿಲ್ಗಾಲಿಗೆ ಹೋದನು>> ಎಂಬ ವರ್ತಮಾನವು ಬಂದದ್ದರಿಂದ

13ಸಮುವೇಲನು ಅಲ್ಲಿಗೆ ಹೋದನು. ಸೌಲನು ಅವನನ್ನು ಕಂಡು, <<ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು>> ಅಂದನು.

14ಅದಕ್ಕೆ ಸಮುವೇಲನು, <<ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತದೆ, ದನಗಳ ಶಬ್ದವು ನನಗೆ ಕೇಳಿಸುತ್ತದೆ>> ಎನ್ನಲು

15ಸೌಲನು, <<ಜನರು ನಿನ್ನ ದೇವರಾದ ಯೆಹೋವನಿಗೆ ಯಜ್ಞವನ್ನು ಆರ್ಪಿಸುವುದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಉತ್ತಮವಾದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು>> ಎಂದು ಉತ್ತರಕೊಟ್ಟನು.

16ಆಗ ಸಮುವೇಲನು ಅವನಿಗೆ, <<ಅದಿರಲಿ; ಯೆಹೋವನು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು>> ಎನ್ನಲು ಅವನು, <<ಹೇಳು>> ಅಂದನು.

17ಸಮುವೇಲನು, <<ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಯೆಹೋವನು ನಿನಗೆ ಇಸ್ರಾಯೇಲ್ಯರಲ್ಲಿ ರಾಜ್ಯಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸನ್ನಾಗಿ ಮಾಡಿದನು.

18ಆತನು ನಿನಗೆ, <ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು> ಎಂದು ಹೇಳಿದನು.

19ಆದರೆ ನೀನು ಯೆಹೋವನ ಮಾತನ್ನು ಕೇಳದೆ ಕೊಳ್ಳೆಗಾಗಿ ಮನಸೋತು ಆತನಿಗೆ ದ್ರೋಹಮಾಡಿದ್ದೇಕೆ?>> ಅಂದನು.

20ಆಗ ಸೌಲನು ಸಮುವೇಲನಿಗೆ, <<ಏನು? ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? ಆತನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲಾ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದು ತಂದೆನು.

21ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞಾರ್ಪಣೆಮಾಡುವುದಕ್ಕಾಗಿ ಉಳಿಸಿ ತಂದರು>> ಎಂದು ಉತ್ತರಕೊಟ್ಟನು.

22ಅದಕ್ಕೆ ಸಮುವೇಲನು, <<ಯೆಹೋವನು ವಿಧೇಯತ್ವವನ್ನು ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವುದಕ್ಕಿಂತ ಆತನ ಆಜ್ಞಾಪಾಲನೆ ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿದೇಯತೆ ವಿಶಿಷ್ಟವಾದುದು.

23ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವುದು. ಹಟವು ಮಿಥ್ಯಾಭಕ್ತಿಗೂ, ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತಿನಂತೆ ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಅರಸುತನದಿಂದ ನಿವಾರಿಸಿಬಿಟ್ಟಿದ್ದಾನೆ>> ಎಂದು ಹೇಳಿದನು.

24ಸೌಲನು ಸಮುವೇಲನಿಗೆ, <<ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು.

25ನೀನು ದಯವಿಟ್ಟು ನನ್ನ ಪಾಪವನ್ನು ಕ್ಷಮಿಸು; ನಾನು ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ>> ಎಂದು ಅವನನ್ನು ಬೇಡಿಕೊಂಡನು.

26ಅದಕ್ಕೆ ಸಮುವೇಲನು, <<ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಮಾತನ್ನು ಅನುಸರಿಸಿ ನಡೆಯದೆಇದ್ದುದರಿಂದ ಆತನು ನಿನ್ನನ್ನು ಇಸ್ರಾಯೇಲರ ಅರಸುತನದಿಂದ ನಿವಾರಿಸಿದ್ದಾನೆ>> ಎಂದು ಹೇಳಿ ತಿರುಗಿಕೊಂಡು ಹೊರಡಲು

27ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು.

28ಆಗ ಸಮುವೇಲನು ಅವನಿಗೆ, <<ಯೆಹೋವನು ಈ ಹೊತ್ತು ಇಸ್ರಾಯೇಲಿನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನಗಿಂತ ಉತ್ತಮನಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ.

29ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ>> ಎಂದು ಹೇಳಿದನು.

30ಅದಕ್ಕೆ ಸೌಲನು, <<ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲರ ಮುಂದೆಯೂ, ಜನರ ಮುಂದೆಯೂ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು. ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ>> ಎಂದು ಬೇಡಿಕೊಂಡನು.

31ಸಮುವೇಲನು ಹಿಂದಿರುಗಿ ಸೌಲನ ಜೊತೆಯಲ್ಲಿ ಹೋದನು. ಆಗ ಸೌಲನು ದೇವರನ್ನು ಆರಾಧಿಸಿದನು.

32ತರುವಾಯ ಸಮುವೇಲನು, <<ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ಕರೆತನ್ನಿರಿ>> ಎಂದನು. ಆಗಾಗನು ಮರಣಭಯ ತಪ್ಪಿತೆಂದು ನೆನಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು.

33ಆದರೆ ಸಮುವೇಲನು ಅವನಿಗೆ, <<ನಿನ್ನ ಕತ್ತಿಯು ಅನೇಕ ಸ್ತ್ರೀಯರಿಗೆ ಪುತ್ರಶೋಕವನ್ನುಂಟುಮಾಡಿದೆ; ಅದರಂತೆ ನಿನ್ನ ತಾಯಿಯು ಎಲ್ಲರಿಗಿಂತಲೂ ಹೆಚ್ಚಾಗಿ ಪುತ್ರಶೋಕವನ್ನು ಅನುಭವಿಸಲಿ>> ಎಂದು ಹೇಳಿ ಅವನನ್ನು ಗಿಲ್ಗಾಲಿನಲ್ಲಿ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.

34ಅನಂತರ ಸಮುವೇಲನು ರಾಮಕ್ಕೆ ಹೋದನು; ಸೌಲನು ತನ್ನ ಊರಾದ ಗಿಬೆಯದಲ್ಲಿರುವ ಮನೆಗೆ ಹೋದನು.

35ಸಮುವೇಲನು ಜೀವದಿಂದ ಇರುವವರೆಗೂ ಸೌಲನನ್ನು ನೋಡಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡಿದ್ದಕ್ಕಾಗಿ ವಿಷಾದಪಟ್ಟನು. ಸಮುವೇಲನು ಅವನ ಕುರಿತು ದುಃಖಪಡುತ್ತಿದ್ದನು.


  Share Facebook  |  Share Twitter

 <<  1 Samuel 15 >> 


Bible2india.com
© 2010-2024
Help
Dual Panel

Laporan Masalah/Saran