Bible 2 India Mobile
[VER] : [KANNADA]     [PL]  [PB] 
 <<  1 Samuel 12 >> 

1ಸಮುವೇಲನು ಎಲ್ಲಾ ಇಸ್ರಾಯೇಲ್ಯರಿಗೆ, <<ನೋಡಿರಿ, ನಾನು ನಿಮ್ಮ ಬಿನ್ನಹಗಳನ್ನು ಆಲಿಸಿ ನಿಮಗೊಬ್ಬ ಅರಸನನ್ನು ನೇಮಿಸಿದೆನು.

2ಇನ್ನು ಮುಂದೆ ಇವನೇ ನಿಮ್ಮ ಅರಸನಾಗಿರುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮೊಂದಿಗಿದ್ದಾರೆ.

3ಇಲ್ಲಿ ನಿಂತುಕೊಂಡಿರುವ ನಾನು ಯಾರ ಎತ್ತನ್ನಾಗಲಿ, ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರೂ ವಂಚಿಸಿ, ಪೀಡಿಸಿದ್ದೂ, ಲಂಚ ತೆಗೆದುಕೊಂಡು ಕುರುಡನಂತೆ ತೀರ್ಪು ಮಾಡಿದ್ದೂ ಉಂಟೋ? ಇದ್ದರೆ ಯೆಹೋವನ ಮುಂದೆಯೂ ಆತನ ಅಭಿಷಕ್ತನ ಮುಂದೆಯೂ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ>> ಅಂದನು.

4ಅವರು,<<ನೀನು ನಮ್ಮನ್ನು ವಂಚಿಸಿ ಪೀಡಿಸಿದ್ದಾಗಲಿ, ನಮ್ಮಿಂದ ಏನಾದರೂ ಕಸಿದುಕೊಂಡದ್ದಾಗಲಿ ಇರುವುದಿಲ್ಲ>> ಎಂದು ಉತ್ತರ ಕೊಟ್ಟರು.

5ಸಮುವೇಲನು ಪುನಃ <<ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲ ಎಂಬುದಕ್ಕೆ ಯೆಹೋವನೂ ಆತನ ಅಭಿಷಕ್ತನೂ ಸಾಕ್ಷಿಯಾಗಿದ್ದಾರೆ>> ಎಂದನು. ಅವರು, <<ಹೌದು, ಯೆಹೊವನೇ ಸಾಕ್ಷಿಯಾಗಿದ್ದಾನೆ>> ಎಂದು ಹೇಳಿದರು.

6ಆಗ ಸಮುವೇಲನು, <<ನಿಮ್ಮ ಪಿತೃಗಳನ್ನು ಐಗುಪ್ತದಿಂದ ಕರತರುವುದಕ್ಕಾಗಿ ಮೋಶೆ ಹಾಗೂ ಆರೋನರನ್ನು ನೇಮಿಸಿದ ಯೆಹೋವನೇ ಇದಕ್ಕೆ ಸಾಕ್ಷಿ.

7ಇಲ್ಲಿ ನಿಂತುಕೊಂಡು ಕೇಳಿರಿ; ಯೆಹೋವನು ನಿಮಗೋಸ್ಕರವೂ, ನಿಮ್ಮ ಪಿತೃಗಳಿಗೋಸ್ಕರವೂ ನಡೆಸಿದ ನೀತಿಕಾರ್ಯಗಳನ್ನು ಕುರಿತು ಆತನ ಎದುರಿನಲ್ಲಿ ನಿಮ್ಮ ನೆನಪಿಗೆ ತಂದು, ನಿಮ್ಮನ್ನು ಎಚ್ಚರಿಸುತ್ತೇನೆ.

8ಐಗುಪ್ತಕ್ಕೆ ಬಂದ ಯಾಕೋಬನ ವಂಶದವರಾದ ನಿಮ್ಮ ಹಿರಿಯರು ಯೆಹೋವನಿಗೆ ಮೊರೆಯಿಟ್ಟಾಗ, ಆತನು ಮೋಶೆ ಆರೋನರ ಮುಖಾಂತರ ಅವರನ್ನು ಐಗುಪ್ತದಿಂದ ಬಿಡಿಸಿ ಈ ದೇಶದಲ್ಲಿ ನೆಲೆಗೊಳಿಸಿದನು.

9ಅವರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಡಲು ಆತನು ಅವರನ್ನು ಹಾಚೋರಿನ ಸೇನಾಧಿಪತಿಯಾದ ಸೀಸೆರನಿಗೂ, ಫಿಲಿಷ್ಟಿಯರಿಗೂ, ಮೋವಾಬ್‌ ರಾಜನಿಗೂ ಮಾರಿಬಿಟ್ಟನು. ಇವರು ಬಂದು ಅವರೊಡನೆ ಯುದ್ಧಮಾಡಿದರು.

10ಆಗ ಅವರು ಯೆಹೋವನಿಗೆ, <ನಾವು ಯೆಹೋವನಾದ ನಿನ್ನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸಿ ಪಾಪಮಾಡಿದ್ದೇವೆ. ಈಗ ಕೃಪೆಮಾಡಿ ನಮ್ಮನ್ನು ಶತ್ರುಗಳ ಕೈಯಿಂದ ಬಿಡಿಸು; ನಾವು ಇನ್ನು ಮುಂದೆ ನಿನ್ನನ್ನೇ ಸೇವಿಸುವೆವು> ಎಂದು ಮೊರೆಯಿಟ್ಟರು.

11ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ, ಸಮುವೇಲ್ ಇವರನ್ನು ಕಳುಹಿಸಿ ನಿಮ್ಮನ್ನು ಎಲ್ಲಾ ಶತ್ರುಗಳ ಕೈಯಿಂದ ಬಿಡಿಸಿ ಸುರಕ್ಷಿತವಾಗಿ ಜೀವಿಸುವಂತೆ ಮಾಡಿದನು.

12ಅಮ್ಮೋನಿಯರ ಅರಸನಾದ ನಾಹಾಷನು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತಾನೆಂದು ನಿಮಗೆ ಗೊತ್ತಾಗಲು, ನಿಮ್ಮ ದೇವರಾದ ಯೆಹೋವನು ನಿಮ್ಮ ಅರಸನಾಗಿದ್ದರೂ ನೀವು, <ನಮಗೊಬ್ಬ ಅರಸನನ್ನು ನೇಮಿಸು> ಎಂದು ನನ್ನನ್ನು ಬೇಡಿಕೊಂಡಿರಿ.

13ಇಗೋ, ನೀವು ಅಪೇಕ್ಷಿಸಿ ಆರಿಸಿಕೊಂಡ ಅರಸನು ಇವನೇ; ಯೆಹೋವನು ಇವನನ್ನು ನಿಮ್ಮ ಮೇಲೆ ಅರಸನನ್ನಾಗಿ ನೇಮಿಸಿದ್ದಾನೆ.

14ನೀವೂ, ನಿಮ್ಮ ಅರಸನೂ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ಆತನಿಗೆ ವಿಧೇಯರಾಗಿ, ಆತನನ್ನು ಸೇವಿಸುತ್ತಾ, ತಪ್ಪದೆ ಆತನ ಮಾತನ್ನು ಪಾಲಿಸುವವರಾಗಿ, ಆತನನ್ನೇ ಹೊಂದಿಕೊಂಡಿರುವುದಾದರೆ ಎಷ್ಟೋ ಒಳ್ಳೆಯದು.

15ನೀವು ಯೆಹೋವನ ಮಾತನ್ನು ಕೇಳದೆಯೂ, ಆತನ ಆಜ್ಞೆಗಳನ್ನು ಕೈಕೊಳ್ಳದೆಯೂ ಹೋದರೆ, ಆತನ ಹಸ್ತವು ನಿಮ್ಮ ಹಿರಿಯರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವುದು.

16ಈಗ ಯೆಹೋವನು ನಿಮ್ಮ ಕಣ್ಣುಮುಂದೆ ಮಾಡುವ ಮಹತ್ಕಾರ್ಯವನ್ನು ಹತ್ತಿರ ಬಂದು ನೋಡಿರಿ.

17ನಾನು ಯೆಹೋವನಿಗೆ ಮೊರೆಯಿಡುವೆನು; ಈಗ ಗೋದಿಯ ಸುಗ್ಗಿಯಿದ್ದರೂ ಆತನು ಗುಡುಗನ್ನೂ, ಮಳೆಯನ್ನೂ ಕಳುಹಿಸುವುದರ ಮೂಲಕ ನೀವು ಅರಸನನ್ನು ಕೇಳಿಕೊಂಡದ್ದು ತನ್ನ ದೃಷ್ಟಿಯಲ್ಲಿ ತಪ್ಪು ಎಂಬುದನ್ನು ತೋರಿಸಿಕೊಡುವನು>> ಎಂದು ಅವರಿಗೆ ಹೇಳಿ ಯೆಹೋವನಿಗೆ ಮೊರೆಯಿಟ್ಟನು.

18ಆಗ ಯೆಹೋವನು ಗುಡುಗು ಮಳೆಗಳನ್ನು ಕಳುಹಿಸಿದನು. ಎಲ್ಲಾ ಜನರು ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು

19ಸಮುವೇಲನನ್ನು, <<ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಸೇರಿಕೊಂಡಿತು; ಆದ್ದರಿಂದ ನಿನ್ನ ಸೇವಕರಾದ ನಾವು ಸಾಯದಂತೆ ನಿನ್ನ ದೇವರಾದ ಯೆಹೋವನನ್ನು ಬೇಡಿಕೋ>> ಎಂದು ವಿಜ್ಞಾಪಿಸಲು

20ಅವನು,<<ಭಯಪಡಬೇಡಿರಿ; ಇಷ್ಟು ಪಾಪಮಾಡಿದ ನೀವು ಇನ್ನು ಮುಂದೆಯಾದರೂ ಅದನ್ನು ಬಿಟ್ಟು, ಯೆಹೋವನನ್ನು ಅಂಟಿಕೊಂಡು, ಪೂರ್ಣಮನಸ್ಸಿನಿಂದ ಆತನೊಬ್ಬನನ್ನೇ ಸೇವಿಸಿರಿ.

21ದೇವರಿಗೆ ಇಷ್ಟವಿಲ್ಲದ ವಿಷಯಗಳನ್ನು ಹಿಂಬಾಲಿಸಬೇಡಿರಿ; ಅವುಗಳಿಂದ ನಿಮಗೆ ಲಾಭವೂ, ರಕ್ಷಣೆಯೂ ಸಿಕ್ಕುವುದಿಲ್ಲ. ಅವು ವ್ಯರ್ಥವಾದವುಗಳೇ.

22ಯೆಹೋವನು ದಯದಿಂದ ನಿಮ್ಮನ್ನು ಸ್ವಕೀಯಜನವನ್ನಾಗಿ ಆರಿಸಿಕೊಂಡಮೇಲೆ ಆತನು ತನ್ನ ಮಹೋನ್ನತ ನಾಮದ ನಿಮಿತ್ತ ನಿಮ್ಮನ್ನು ಕೈಬಿಡುವುದೇ ಇಲ್ಲ.

23ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ, ಆತನ ಉತ್ತಮ ನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವುದನ್ನು ಬಿಡುವುದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು.

24ನೀವಾದರೋ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಆತನು ನಿಮಗೋಸ್ಕರವಾಗಿ ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಿಕೊಂಡು, ಆತನನ್ನು ಸತ್ಯದಿಂದಲೂ, ಪೂರ್ಣಮನಸ್ಸಿನಿಂದಲೂ ಸೇವಿಸುತ್ತಾ ಬರಬೇಕು;

25ನೀವು ದ್ರೋಹಿಗಳಾಗಿಯೇ ಇದ್ದರೆ ನೀವು ಮತ್ತು ನಿಮ್ಮ ಅರಸನು ನಾಶವಾಗುವಿರಿ>> ಎಂದು ಹೇಳಿದನು.


  Share Facebook  |  Share Twitter

 <<  1 Samuel 12 >> 


Bible2india.com
© 2010-2024
Help
Dual Panel

Laporan Masalah/Saran