Bible 2 India Mobile
[VER] : [KANNADA]     [PL]  [PB] 
 <<  1 Corinthians 8 >> 

1ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. <<ನಮ್ಮೆಲ್ಲರಿಗೆ ಜ್ಞಾನವುಂಟೆಂದು>> ನಾವು ಬಲ್ಲೆವು. ತಿಳುವಳಿಕೆಯು ಉಬ್ಬಿಸುತ್ತದೆ, ಆದರೆ ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ.

2ಒಬ್ಬನು ತಾನು ಏನಾದರೂ ತಿಳಿದುಕೊಂಡಿದ್ದೇನೆಂದು ಭಾವಿಸುವುದಾದರೆ ಅವನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿದುಕೊಂಡಿರುವುದಿಲ್ಲ.

3ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ದೇವರು ಅವನನ್ನು ತಿಳಿದುಕೊಂಡಿದ್ದಾನೆ.

4ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, <<ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು>> ನಮಗೆ ತಿಳಿದಿದೆ ಮತ್ತು <<ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ>> ಬಲ್ಲೆವು.

5ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, <<ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು>> ಬಹಳವಿದ್ದರೂ,

6<<ನಮಗಾದರೋ ಒಬ್ಬನೇ ತಂದೆಯಾದ ದೇವರು; ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. ನಾವೂ ಆತನ ಮುಖಾಂತರ ಉಂಟಾದೆವು.>>

7ಆದಾಗ್ಯೂ, ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, ಕೆಲವರು ಈ ವರೆಗೂ ವಿಗ್ರಹಾಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ.

8ಆದರೆ ನಾವು ತಿನ್ನುವ ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ.

9ಆದರೆ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲಹೀನನಾದವನಿಗೆ ಅಡ್ಡಿಯಾಗದಂತೆ ಎಚ್ಚರವಾಗಿರಿ.

10ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.

11ಹೀಗೆ ಈ ನಿನ್ನ ಜ್ಞಾನದಿಂದ ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ.

12ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ ಅವರ ದುರ್ಬಲವಾದ ಮನಸಾಕ್ಷಿಯನ್ನು ನೋಯಿಸಿದರೆ ನೀವು ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ.

13ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ.


  Share Facebook  |  Share Twitter

 <<  1 Corinthians 8 >> 


Bible2india.com
© 2010-2024
Help
Dual Panel

Laporan Masalah/Saran