Bible 2 India Mobile
[VER] : [KANNADA]     [PL]  [PB] 
 <<  1 Corinthians 11 >> 

1ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.

2ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.

3ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.

4ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

5ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.

6ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

7ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.

8ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.

9ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.

10ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.

11ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ.

12ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.

13ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ

14ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ,

15ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ?

16ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.

17ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.

18ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.

19ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.

20ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.

21ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

22ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.

23ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,

24<<ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ>> ಅಂದನು.

25ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, <<ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ>> ಅಂದನು.

26ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ದಿಪಡಿಸುತ್ತೀರಿ.

27ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.

28ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.

29ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.

30ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುವರು ಮತ್ತು ಅನೇಕರು ಸತ್ತಿತ್ತಾರೆ.

31ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ.

32ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.

33ಆದಕಾರಣ ನನ್ನ ಪ್ರಿಯರೇ, ಈ ಭೋಜನವನ್ನು ಮಾಡುವುದಕ್ಕೆ ಸೇರಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ.

34ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ ನೀವು ಸೇರಿಬಂದದ್ದು ನ್ಯಾಯ ತೀರ್ಪಿಗೊಳಗಾಗುವುದಕ್ಕೆ ಕಾರಣವಾಗಬಾರದು. ಇನ್ನುಳಿದಿರುವ ಸಂಗತಿಗಳನ್ನು ನಾನು ಬಂದ ನಂತರ ಆದೇಶಿಸುತ್ತೇನೆ.


  Share Facebook  |  Share Twitter

 <<  1 Corinthians 11 >> 


Bible2india.com
© 2010-2024
Help
Dual Panel

Laporan Masalah/Saran