Bible 2 India Mobile
[VER] : [KANNADA]     [PL]  [PB] 
 <<  Zechariah 13 >> 

1ಆ ದಿನದಲ್ಲಿ ಪಾಪವನ್ನೂ, ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ, ಯೆರೂಸಲೇಮಿನವರಿಗೂ ತೆರೆದಿರುವುದು.

2ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಆ ದಿನದಲ್ಲಿ ನಾನು ವಿಗ್ರಹಗಳನ್ನು ದೇಶದೊಳಗಿಂದ ನಿರ್ನಾಮಮಾಡುವೆನು, ಅವು ಇನ್ನು ಯಾರ ನೆನಪಿಗೂ ಬರುವುದಿಲ್ಲ; ಅಲ್ಲದೆ ಸುಳ್ಳು ಪ್ರವಾದಿಗಳನ್ನೂ, ದುರಾತ್ಮವನ್ನೂ ದೇಶದೊಳಗಿಂದ ತೊಲಗಿಸಿಬಿಡುವೆನು.

3ಆಗ ಯಾವನಾದರೂ ಮತ್ತೆ ಪ್ರವಾದನೆಮಾಡಿದರೆ ಅವನ ಹೆತ್ತ ತಾಯಿತಂದೆಗಳು ಅವನಿಗೆ, <ನೀನು ಉಳಿಯಬೇಡ; ಯೆಹೋವನ ಹೆಸರೆತ್ತಿ ಸುಳ್ಳಾಡುತ್ತಿ> ಎಂದು ಹೇಳಿ ಆ ಹೆತ್ತ ತಾಯಿತಂದೆಗಳೇ ಅವನ ಪ್ರವಾದನೆಯ ನಿಮಿತ್ತ ಅವನನ್ನು ಇರಿದುಬಿಡುವರು.

4<<ಆ ದಿನದಲ್ಲಿ ಯಾವ ಪ್ರವಾದಿಯೇ ಆಗಲಿ ಪ್ರವಾದನೆ ಮಾಡಬೇಕೆಂದಿರುವಾಗ ತನಗಾದ ದರ್ಶನವನ್ನು ಪ್ರಕಟಿಸಲು ನಾಚಿಕೆ ಪಡುವನು; ಯಾವನೂ ಮೋಸಕ್ಕಾಗಿ ಕಂಬಳಿಯನ್ನು ಹೊದ್ದುಕೊಳ್ಳನು;

5ಒಬ್ಬನು, <ನಾನು ಪ್ರವಾದಿಯಲ್ಲ, ಹೊಲದ ಕೆಲಸದವನು; ಚಿಕ್ಕ ವಯಸ್ಸಿನಿಂದಲೂ ಗುಲಾಮನಾಗಿದ್ದೇನೆ> ಎಂದು ಹೇಳಲು,

6ಮತ್ತೊಬ್ಬನು ಅವನನ್ನು, <ನಿನ್ನ ಎದೆಯ ಮೇಲಿರುವ ಈ ಗಾಯಗಳು ಏನು?> ಎಂದು ಕೇಳಿದರೆ ಅವನು, <ಮಿತ್ರರ ಮನೆಯಲ್ಲಿ ನನಗಾದ ಗಾಯಗಳು> >> ಎಂದು ಉತ್ತರ ಕೊಡುವನು.

7ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಖಡ್ಗವೇ, ನಾನು ನೇಮಿಸಿದ ಕುರುಬನೂ, ನನ್ನ ಸಂಗಡಿಗನೂ ಆಗಿರುವವನ ವಿರುದ್ಧ ಎಚ್ಚರಗೊಳ್ಳು; ಕುರುಬನನ್ನು ಹೊಡೆ, ಕುರಿಗಳು ಚದುರಿಹೋಗುವವು; ಮರಿಗಳ ಮೇಲೂ ಕೈಮಾಡಬೇಕೆಂದಿದ್ದೇನೆ.

8<<ದೇಶದೊಳಗೆಲ್ಲಾ ಮೂರರಲ್ಲಿ ಎರಡು ಭಾಗದವರು ಹತರಾಗಿ ಸಾಯುವರು, ಮೂರನೆಯ ಭಾಗದವರು ಅಲ್ಲಿ ಉಳಿಯುವರು>> ಇದು ಯೆಹೋವನ ನುಡಿ.

9<<ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿ ಮಾಡುವೆನು; ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು, ನಾನು ಆಲಿಸುವೆನು; ನಾನು, <ಇವರು ನನ್ನ ಜನರು> ಅಂದುಕೊಳ್ಳುವೆನು. ಅವರು, <ನಮ್ಮ ದೇವರಾದ ಯೆಹೋವನೇ> ಅನ್ನುವರು.>>



 <<  Zechariah 13 >> 


Bible2india.com
© 2010-2024
Help
Single Panel

Laporan Masalah/Saran