Bible 2 India Mobile
[VER] : [KANNADA]     [PL]  [PB] 
 <<  Zechariah 1 >> 

1ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನಾದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು. ಅದೇನೆಂದರೆ,

2<<ಯೆಹೋವನು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿದ್ದಾನೆ.

3ಆದಕಾರಣ ನೀನು ನಿನ್ನ ಜನರಿಗೆ ಹೀಗೆ ಹೇಳು, <ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನನ್ನ ಕಡೆಗೆ ಪುನಃ ತಿರುಗಿಕೊಳ್ಳಿರಿ> >> ಇದು ಸೇನಾಧೀಶ್ವರನಾದ ಯೆಹೋವನ ನುಡಿ, <<ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

4ನಿಮ್ಮ ಪಿತೃಗಳಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ, <<ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, <ನಿಮ್ಮ ದುರ್ಮಾರ್ಗ, ದುಷ್ಕೃತ್ಯಗಳಿಂದ ಹಿಂದಿರುಗಿರಿ> ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ>> ಇದು ಯೆಹೋವನ ನುಡಿ.

5<<ನಿಮ್ಮ ಪಿತೃಗಳು ಎಲ್ಲಿ? ಪ್ರವಾದಿಗಳು ಸದಾಕಾಲ ನಿತ್ಯನಿರಂತರವಾಗಿ ಇರುವರೇ?

6ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪಿತೃಗಳನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ. ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ <ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ> >> ಅಂದುಕೊಂಡರು.

7ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನಾದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂತು,

8<<ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು.

9ನನಗೆ ಕನಸಿನ ಅರ್ಥವನ್ನು ವಿವರಿಸುವ ದೇವದೂತನನ್ನು, <ಸ್ವಾಮಿ ಇವರು ಯಾರು?> >> ಎಂದು ನಾನು ಕೇಳಲು ಅತನು ನನಗೆ, <<ಇವರು ಇಂಥವರೆಂದು ನಿನಗೆ ತೋರಿಸುವೆನು>> ಎಂಬುದಾಗಿ ಹೇಳಿದನು.

10ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು, <<ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು>> ಎಂದು ಉತ್ತರಕೊಟ್ಟನು.

11ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ, <<ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ. ಇಗೋ ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ>> ಎಂದು ಅರಿಕೆಮಾಡಿದರು.

12ಇದನ್ನು ಕೇಳಿ ಯೆಹೋವನ ದೂತನು, <<ಸೇನಾಧೀಶ್ವರನಾದ ಯೆಹೋವನೇ, ನೀನು ಎಪ್ಪತ್ತು ವರುಷಗಳಿಂದ ರೋಷಗೊಂಡಿರುವ ಯೆರೂಸಲೇಮ್ ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ>> ಎಂದು ಬಿನ್ನವಿಸಲು,

13ನನ್ನೊಂದಿಗೆ ಮಾತನಾಡಿದ ದೂತನಿಗೆ, ಯೆಹೋವನು ಕರುಣೆ ಹಾಗೂ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು.

14ಆಗ ಆ ದೂತನು ನನಗೆ ಈ ಅಪ್ಪಣೆ ಮಾಡಿದನು, <<ನೀನು ಹೀಗೆ ಸಾರಿ ಹೇಳಬೇಕು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <ಯೆರೂಸಲೇಮಿಗೂ, ಚೀಯೋನಿಗೂ ಅವಮಾನವಾಯಿತಲ್ಲಾ> ಎಂದು ಬಹಳವಾಗಿ ಅಸಮಾಧಾನಗೊಂಡಿದ್ದೇನೆ.

15ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ; ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.>>

16ಹೀಗಿರಲು ಯೆಹೋವನು ಇಂತೆನ್ನುತ್ತಾನೆ, <<ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಪುನಃ ಅಲ್ಲಿ ಕಟ್ಟಲ್ಪಡುವುದು; ಯೆರೂಸಲೇಮಿನಲ್ಲಿ ನೂಲು ಎಳೆಯಲ್ಪಡುವುದು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

17ಮತ್ತೊಮ್ಮೆ ಹೀಗೆ ಸಾರಿ ಹೇಳು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವುದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.>>

18ನಾನು ಕಣ್ಣೆತ್ತಿ ನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.

19ವಿವರಿಸುವ ದೂತನನ್ನು ಕುರಿತು, <<ಇವು ಏನು?>> ಎಂದು ನಾನು ಕೇಳಿದ್ದಕ್ಕೆ ಅವನು, <<ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು>> ಎಂದು ಉತ್ತರಕೊಟ್ಟನು.

20ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.

21ಆಗ ನಾನು, <<ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?>> ಎಂದು ಕೇಳಲು ಅವನು, <<ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡವುದಕ್ಕೆ ಬಂದಿದ್ದಾರೆ>> ಎಂದು ಹೇಳಿದನು.



 <<  Zechariah 1 >> 


Bible2india.com
© 2010-2024
Help
Single Panel

Laporan Masalah/Saran