Bible 2 India Mobile
[VER] : [KANNADA]     [PL]  [PB] 
 <<  Romans 10 >> 

1ಪ್ರಿಯರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.

2ದೇವರ ಬಗ್ಗೆ ತೀಕ್ಷ್ಣತೆಯುಳ್ಳವರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿ ಕೊಡುತ್ತೇನೆ; ಆದರೂ ಅವರ ತೀಕ್ಷ್ಣತೆಯು ಜ್ಞಾನಾನುಸಾರವಾದುದಲ್ಲ.

3ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವಂತ ನೀತಿಯನ್ನೇ; ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದುದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.

4ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿಕೊಡುವುದಕ್ಕಾಗಿ ಕ್ರಿಸ್ತನೇ ಧರ್ಮಶಾಸ್ತ್ರಕ್ಕೆ ಅಂತ್ಯವಾಗಿದ್ದಾನೆ.

5ಧರ್ಮಶಾಸ್ತ್ರದ ನೀತಿಯನುಸಾರ, <<ಅದನ್ನು ಅನುಸರಿಸಿದವನು ಅದರಿಂದಲೇ ಜೀವಿಸುವನೆಂದು>> ಮೋಶೆಯು ಬರೆಯುತ್ತಾನೆ.

6ಆದರೆ ನಂಬಿಕೆಯಿಂದುಂಟಾಗುವ ನೀತಿಯು ಈ ರೀತಿಯಾಗಿ ಹೇಳುತ್ತದೆ. << <ಕ್ರಿಸ್ತನನ್ನು ಭೂಮಿಗಿಳಿಸಿಕೊಂಡು ಬರುವುದಕ್ಕಾಗಿ ಮೇಲಣ ಲೋಕಕ್ಕೆ ಏರಿಹೋದವರಾರು?>

7ಎಂದಾಗಲಿ <ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವುದಕ್ಕಾಗಿ ಯಾರು ಪಾತಾಳಲೋಕಕ್ಕೆ ಇಳಿದುಹೋದರು? ಎಂದಾಗಲಿ ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬಾರದು.> >> ಆದರೆ ಅದು ಏನನ್ನು ಹೇಳುತ್ತದೆ.

8<<ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.>> ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.

9ಅದೇನಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.

10ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ.

11<<ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು>> ಧರ್ಮಶಾಸ್ತ್ರವು ಹೇಳುತ್ತದೆ.

12ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ.

13ಅದ್ದರಿಂದಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.

14ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ?

15ಇದಕ್ಕೆ ಸರಿಯಾಗಿ <<ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ>> ಎಂದು ಬರೆದಿದೆ.

16ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, <<ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?>> ಎಂದು ನುಡಿಯುತ್ತಾನೆ.

17ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

18ಆದರೂ <<ಅವರಿಗೆ ಕೇಳಿಸಲಿಲ್ಲವೇನೋ?>> ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. <<ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.>>

19ಆದರೆ <<ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳಿದುಕೊಳ್ಳಲಿಲ್ಲವೇನು>> ಎಂದು ಹೇಳುತ್ತೇನೆ. ಈ ವಿಷಯದಲ್ಲಿ, <<ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಅಸೂಯೆ ಹುಟ್ಟುವಂತೆ ಪ್ರೆರೇಪಿಸುತ್ತೇನೆ; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ರೊಚ್ಚಿಗೆಬ್ಬಿಸುವೆನು>> ಎಂದು ಮೊದಲು ಮೋಶೆಯು ಹೇಳುತ್ತಾನೆ.

20ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ, <<ನನ್ನನ್ನು ಹುಡುಕದವರಿಗೂ ನಾನು ಸಿಕ್ಕಿದೆನು, ನನ್ನನ್ನು ಕೇಳದವರಿಗೆ ನಾನು ಪ್ರತ್ಯಕ್ಷನಾದೆನು,>> ಎಂದು ಹೇಳುತ್ತಾನೆ.

21ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, <<ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು>> ಆತನು ಹೇಳುತ್ತಾನೆ.



 <<  Romans 10 >> 


Bible2india.com
© 2010-2024
Help
Single Panel

Laporan Masalah/Saran