Bible 2 India Mobile
[VER] : [KANNADA]     [PL]  [PB] 
 <<  Ecclesiastes 12 >> 

1ಕಷ್ಟದ ದಿನಗಳು ಬರುವುದಕ್ಕೆ ಮೊದಲು, <<ಇವುಗಳಲ್ಲಿ ನನಗೆ ಸಂತೋಷವಿಲ್ಲ>> ಎಂದು, ನೀನು ಹೇಳುವ ವರುಷಗಳು ಸಮೀಪಿಸುವುದರೊಳಗಾಗಿ, ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.

2ಸೂರ್ಯನೂ, ಚಂದ್ರನೂ ಮತ್ತು ನಕ್ಷತ್ರಗಳೂ ಕತ್ತಲಾಗುವ ಮೊದಲೇ, ಮಳೆಯ ಮೋಡಗಳು ಹಿಂತಿರುಗಿ ಬರುವವು.

3ಅದೇ ಕಾಲದಲ್ಲಿ ಮನೆಗಾವಲಿನವರು ನಡುಗುವರು, ಬಲಿಷ್ಠರು ಬಗ್ಗುವರು, ಅರೆಯುವವರು ಕಡಿಮೆ ಜನರಿರುವುದರಿಂದ ಕೆಲಸವನ್ನು ನಿಲ್ಲಿಸಿಬಿಡುವರು, ಕಿಟಕಿಗಳಿಂದ ನೋಡುವವರು ಮಂಕಾಗುವರು.

4ಬೀದಿಯ ಬಾಗಿಲುಗಳು ಮುಚ್ಚಿರುವವು, ಅರೆಯುವ ಶಬ್ದವು ನಿಲ್ಲುವುದು, ಮನುಷ್ಯನು ಹಕ್ಕಿಯ ಧ್ವನಿಗೆ ಎದ್ದೇಳುವನು, ಗಾಯಕಿಯರೆಲ್ಲಾ ಕುಗ್ಗುವರು.

5ಇದಲ್ಲದೆ ಆ ದಿನಗಳಲ್ಲಿ ಮನುಷ್ಯನಿಗೆ ದಿನ್ನೆಯನ್ನು ಕಂಡರೆ ಭಯ, ಮತ್ತು ದಾರಿಯಲ್ಲಿ ಅಪಾಯ, ಬಾದಾಮಿಯ ಮರವು ಹೂ ಬಿಡುವುದು, ಮಿಡತೆಯು ಕೂಡಾ ಭಾರವಾಗಿರುವುದು, ಆಶೆಯು ಕುಂದುವುದು. ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಡುವನು, ಗೋಳಾಟದವರು ಬೀದಿಯಲ್ಲಿ ತಿರುಗುವರು.

6ಇನ್ನು ಮುಂದೆ ಬೆಳ್ಳಿಯ ತಂತಿಯು ಕಿತ್ತುಹೋಗುವುದು, ಚಿನ್ನದ ಬಟ್ಟಲು ಜಜ್ಜಿಹೋಗುವುದು, ಮಡಿಕೆಯು ಬುಗ್ಗೆಯ ಹತ್ತಿರ ಒಡೆಯುವುದು, ಬಾವಿಯ ರಾಟೆ ಮುರಿಯುವುದು,

7ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವುದು, ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. ಇಷ್ಟರೊಳಗಾಗಿ ನಿನ್ನ ಸೃಷ್ಟಿ ಕರ್ತನನ್ನು ಸ್ಮರಿಸದಿರಬೇಡ.

8<<ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ>> ಎಂದು ಪ್ರಸಂಗಿಯು ಹೇಳುತ್ತಾನೆ.

9ಪ್ರಸಂಗಿಯು ಜ್ಞಾನಿಯಾಗಿದ್ದು, ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು, ಅನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು.

10ಪ್ರಸಂಗಿಯು ಯಥಾರ್ಥ ಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.

11ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು, ಸಂಗ್ರಹ ವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು ಇವೆರಡು ಒಬ್ಬನೇ ಕುರುಬನಿಂದ ಕೊಡಲ್ಪಟ್ಟಿದೆ.

12ನನ್ನ ಕಂದಾ, ಇವುಗಳಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು. ಬಹಳ ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿವ್ಯಾಸಂಗವು ದೇಹಕ್ಕೆ ಆಯಾಸ.

13ವಿಷಯವು ತೀರಿತು, ಎಲ್ಲವೂ ಕೇಳಿ ಮುಗಿಯಿತು, ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು, ಮನುಷ್ಯರೆಲ್ಲರ ಕರ್ತವ್ಯವು ಇದೇ.

14ಒಳ್ಳೆಯದಾಗಲೀ ಅಥವಾ ಕೆಟ್ಟದ್ದಾಗಲೀ, ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸಿ, ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.



 <<  Ecclesiastes 12 >> 


Bible2india.com
© 2010-2024
Help
Single Panel

Laporan Masalah/Saran