Bible 2 India Mobile
[VER] : [KANNADA]     [PL]  [PB] 
 <<  Malachi 3 >> 

1<<ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

2ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ.

3ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.

4ಆಗ ಯೆಹೂದದ ಮತ್ತು ಯೆರೂಸಲೇಮಿನ ನೈವೇದ್ಯವು, ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದಂತೆ ಆಗಿರುವುದು.

5<<ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ಸೂಳೆಗಾರನು, ಸುಳ್ಳುಸಾಕ್ಷಿ ಹೇಳುವವನು, ಕೂಲಿಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

6<<ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.>>

7<<ನಿಮ್ಮ ಪಿತೃಗಳ ಕಾಲದಿಂದಲೂ ನೀವು ನನ್ನ ವಿಧಿಗಳನ್ನು ಅನುಸರಿಸಿ ನಡೆಯಲ್ಲಿಲ್ಲ. ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ, ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ. <<ಯಾವ ವಿಷಯದಲ್ಲಿ ತಿರುಗೋಣ?>> ಎನ್ನುತ್ತೀರಿ

8<<ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. <ನಿನ್ನಿಂದ ಏನು ಕದ್ದುಕೊಂಡಿದ್ದೇವೆ?> ಎಂದು ಕೇಳುತ್ತೀರೋ? ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ ಇವುಗಳನ್ನೇ.

9ನೀವು ಅಂದರೆ ಈ ಜನಾಂಗದವರೆಲ್ಲಾ ನನ್ನಿಂದ ಕದ್ದುಕೊಳ್ಳುವವರಾದ ಕಾರಣ ಶಾಪಗ್ರಸ್ತರಾಗಿದ್ದೀರಿ.

10ನನ್ನ ಆಲಯವು ಆಹಾರದ ಕೊರತೆಯಿಲ್ಲದಂತೆ ನೀವು ದಶಮಾಂಶವನ್ನು ಯಾವಾಗಲೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ? ಯೆಹೋವನಾದ ನನ್ನನ್ನು ಹೀಗೆ ಪರೀಕ್ಷಿಸಿರಿ.

11ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು. ಅದು ನಿಮ್ಮ ಭೂಮಿಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷೆಯಹಣ್ಣು ತೋಟದಲ್ಲಿ ಉದುರಿಹೋಗದು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

12<<ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವುದು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

13<<ನೀವು ನನಗೆ ವಿರುದ್ಧವಾಗಿ ಆಡಿದ ಮಾತುಗಳು ಬಹಳ ಕಠಿಣ>> ಎಂದು ಯೆಹೋವನು ಅನ್ನುತ್ತಾನೆ. <<ನಿನಗೆ ವಿರುದ್ಧವಾಗಿ ಏನು ಮಾಡಿದ್ದೇವೆ?>> ಅನ್ನುತ್ತೀರಾ

14ನೀವು <<ದೇವರನ್ನು ಸೇವಿಸುವುದು ವ್ಯರ್ಥ; ನಾವು ಆತನ ನಿಯಮವನ್ನು ಅನುಸರಿಸಿ ಸೇನಾಧೀಶ್ವರನಾದ ಯೆಹೋವನ ಮುಂದೆ ದುಃಖದಿಂದ ವಿಕಾರಿಗಳಾಗಿ ನಡೆದುಕೊಂಡದ್ದರಿಂದ ಆದ ಲಾಭವೇನು?

15ಈಗ ಅಹಂಕಾರಿಗಳನ್ನು ಭಾಗ್ಯವಂತರೆಂದು ಕೊಂಡಾಡಬೇಕಾಗಿ ಬಂತು; ಹೌದು, ದುಷ್ಕರ್ಮಿಗಳು ಏಳಿಗೆಗೆ ಬಂದಿದ್ದಾರೆ, ದೇವರನ್ನು ಪರೀಕ್ಷಿಸಿದರೂ ಸುರಕ್ಷಿತರಾಗಿದ್ದಾರೆ>> ಅಂದುಕೊಂಡಿದ್ದೀರಲ್ಲಾ.

16ಇಂಥಾ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು, ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮ ಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.

17ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು>> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

18ಆಗ ಶಿಷ್ಟರಿಗೂ, ದುಷ್ಟರಿಗೂ, ದೇವರನ್ನು ಸೇವಿಸುವವರಿಗೂ, ಸೇವಿಸದೆ ಇರುವವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಕಾಣುವಿರಿ.



 <<  Malachi 3 >> 


Bible2india.com
© 2010-2024
Help
Single Panel

Laporan Masalah/Saran