Bible 2 India Mobile
[VER] : [KANNADA]     [PL]  [PB] 
 <<  Job 19 >> 

1ಆಗ ಯೋಬನು ಪುನಃ ಇಂತೆಂದನು,

2<<ಎಷ್ಟರವರೆಗೆ ನನ್ನ ಆತ್ಮವನ್ನು ನೋಯಿಸಿ, ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?

3ಈವರೆಗೆ ಹತ್ತಾರು ಸಾರಿ ನನ್ನನ್ನು ಅವಮಾನಪಡಿಸಿ ನನಗೆ ಕೇಡುಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಿಲ್ಲವಲ್ಲಾ.

4ನಾನು ನಿಜವಾಗಿ ತಪ್ಪುಮಾಡಿದ್ದರೆ ಆ ತಪ್ಪು ನನ್ನದೇ.

5ನನ್ನ ವಿರುದ್ಧವಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು ನನಗಾದ ಅವಮಾನವನ್ನು ನ್ಯಾಯವೆಂದು ಸ್ಥಾಪಿಸುವುದಕ್ಕೆ ನಿಜವಾಗಿ ಇಷ್ಟಪಡುವಿರೋ?

6ಹೀಗಾದರೆ ನನ್ನ ನ್ಯಾಯವನ್ನು ತಿರುಗಿಸಿಬಿಟ್ಟು ನನ್ನ ಸುತ್ತಲೂ ತನ್ನ ಬಲೆಯನ್ನೊಡ್ಡಿದವನು ದೇವರೇ ಎಂದು ತಿಳಿದುಕೊಳ್ಳಿರಿ.

7ಇಗೋ, ಬಲಾತ್ಕಾರವೆಂದು ನಾನು ಕೂಗಿಕೊಂಡರೂ, ಯಾವ ಉತ್ತರವೂ ಇಲ್ಲ. ನಾನು ಮೊರೆಯಿಟ್ಟರೂ, ನ್ಯಾಯವು ನೆರವೇರದು.

8ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ, ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ.

9ನನ್ನ ಘನತೆಯನ್ನು ಸುಲಿದುಬಿಟ್ಟು, ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾನೆ.

10ಆತನು ನನ್ನನ್ನು ಸುತ್ತುಮುತ್ತಲೂ ಕೆಡವಿದ್ದರಿಂದ ಇಲ್ಲದೆ ಹೋದೆನು. ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟಿದ್ದಾನೆ.

11ನನ್ನ ಮೇಲೆ ತನ್ನ ಕೋಪಾಗ್ನಿಯನ್ನು ಧಗಧಗಿಸಿ; ಉರಿಯುವಂತೆ ಮಾಡಿ ನನ್ನನ್ನು ವೈರಿಯೆಂದೆಣಿಸಿದ್ದಾನೆ.

12ಆತನ ದಂಡುಗಳು ಒಟ್ಟಿಗೆ ಮುಂದುವರೆದು ನನ್ನ ವಿರುದ್ಧವಾಗಿ ದಿಬ್ಬಹಾಕಿ, ನನ್ನ ಗುಡಾರದ ಸುತ್ತಲೂ ಇಳಿದಿವೆ.

13ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ, ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.

14ನನ್ನ ಬಂಧುಗಳು ನನ್ನನ್ನು ಬಿಟ್ಟುಬಿಟ್ಟಿದ್ದಾರೆ, ನನಗೆ ಪರಿಚಯವಿದ್ದವರು ನನ್ನನ್ನು ಮರೆತಿದ್ದಾರೆ.

15ನನ್ನ ಪರಿಜನರೂ, ದಾಸಿಯರೂ ನನ್ನನ್ನು ಅನ್ಯನೆಂದೆಣಿಸುತ್ತಾರೆ, ಅವರ ದೃಷ್ಟಿಗೆ ಪರದೇಶಿಯಾಗಿದ್ದಾನೆ.

16ನಾನು ನನ್ನ ಆಳನ್ನು ಕರೆದರೂ ಅವನು ಉತ್ತರಕೊಡುವುದಿಲ್ಲ, ಬಾಯಿ ತೆರೆದು ಬೇಡಿಕೊಳ್ಳಬೇಕಾಗಿ ಬಂತು.

17ನನ್ನ ಬದುಕು ನನ್ನ ಹೆಂಡತಿಗೆ ಅಸಹ್ಯವಾಗಿದೆ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ ಹೇಸಿಕೆಯಾಗಿದ್ದೇನೆ.

18ಚಿಕ್ಕವರೂ ಕೂಡ ನನ್ನನ್ನು ಹೀನೈಸುತ್ತಾರೆ, ನಾನು ಏಳಲು ಪ್ರಯಾಸಪಡುತ್ತಿರುವಾಗ ಅವರ ಹರಟೆಗೆ ಗುರಿಯಾಗುತ್ತೇನೆ.

19ನನ್ನ ಆಪ್ತಮಿತ್ರರೆಲ್ಲರೂ ನನ್ನನ್ನು ನೋಡಿ ಹೇಸಿಕೊಳ್ಳುತ್ತಾರೆ; ನನ್ನ ಪ್ರೀತಿಪಾತ್ರರು ಸಹ ನನ್ನ ಮೇಲೆ ತಿರುಗಿಬಿದ್ದಿದ್ದಾರೆ.

20ನನ್ನ ಎಲುಬು ಚರ್ಮಕ್ಕೂ, ಮಾಂಸಕ್ಕೂ ಅಂಟಿಹೋಗಿದೆ, ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು (ಮರಣಕ್ಕೆ) ಓರೆಯಾಗಿದ್ದೇನೆ.

21ನನ್ನ ಮಿತ್ರರೇ, ಕರುಣಿಸಿರಿ, ನೀವಾದರೂ ಕರುಣಿಸಿರಿ! ದೇವರ ಕೈ ನನ್ನನ್ನು ಹೊಡೆಯಿತಲ್ಲಾ.

22ದೇವರ ಹಾಗೆ ನೀವೂ ನನ್ನನ್ನು ಏಕೆ ಹಿಂಸಿಸುತ್ತೀರಿ? ನನ್ನನ್ನು ಹಿಂಸಿಸಿ ನಿಮಗೆ ಸಾಕಾಗಲಿಲ್ಲವೋ?

23ಆಹಾ, ನನ್ನ ಮಾತುಗಳನ್ನು ಬರೆದಿಟ್ಟರೆ ಎಷ್ಟೋ ಲೇಸು! ಪುಸ್ತಕದಲ್ಲಿ ದಾಖಲಿಸಿದರೆ ಎಷ್ಟೋ ಒಳ್ಳೆಯದು!

24ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸ ಎರೆದು, ಶಾಶ್ವತ ಶಾಸನವಾಗಿ ಮಾಡಿದರೆ ನನಗೆ ಎಷ್ಟೋ ಉಪಕಾರ!

25ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು, ಕೊನೆಯಲ್ಲಿ ಆತನು ಭೂಮಿಗೆ ಇಳಿದು ಬರುವನು.

26ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ, ದೇಹದಾರಿಯಾಗಿ ದೇವರನ್ನು ನೋಡುವೆನು.

27ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು, ಮತ್ತೊಬ್ಬನಾಗಿ ಅಲ್ಲ. ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ.

28ಅವನಿಗೆ, <ಆದಷ್ಟು ಹಿಂಸೆಯನ್ನು ಮಾಡೋಣ, ಅವನಿಗೆ ಸಂಭವಿಸಿದ್ದಕ್ಕೆ ಮೂಲವು ಅವನಲ್ಲಿಯೇ ಅಡಗಿದೆ> ಎಂದು ನೀವು ಆಡಿಕೊಂಡ ಕಾರಣ,

29ಕತ್ತಿಗೆ ಭಯಪಡಿರಿ, ಏಕೆಂದರೆ ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯನಿರ್ಣಯವುಂಟೆಂದು ತಿಳಿದುಕೊಳ್ಳುವಿರಿ.>>



 <<  Job 19 >> 


Bible2india.com
© 2010-2024
Help
Single Panel

Laporan Masalah/Saran